×
Ad

ಕಲ್ಲುಪ್ಪಿನಲ್ಲಿ ಅಬ್ದುಲ್ ಕಲಾಂ ಚಿತ್ರ ರಚನೆ

Update: 2018-11-15 16:38 IST

ಮೂಡುಬಿದಿರೆ, ನ. 15ವಿವಿಧ ಸೊಬಗಿನ ಬಣ್ಣಗಳನ್ನು ಬಳಸಿ ವರ್ಣರಂಜಿತ ಚಿತ್ತಾರವನ್ನು ಮೂಡಿಸಿದ ಆ ಚಿತ್ರದಲ್ಲಿ ಏನೋ ಒಂದು ಬಗೆಯ ಆಕರ್ಷಣೆಯ ಚೇತನ. ಒಂದಿನಿತೂ ಮೂಲ ಚಿತ್ರಕ್ಕೆ ಕೊರತೆಯೆನಿಸದಂತೆ ಕಲಾವಿದನ ಸೃಜನಶೀಲತೆ ಮತ್ತು ಪ್ರಯೋಗಶೀಲತೆಯೇ ಮೈದಳೆದು ನಿಂತಿರುವ ಆ ಚಿತ್ರ ಸೋಜಿಗದ ಪ್ರತೀಕ, ಅದುವೇ ಅಬ್ದುಲ್ ಕಲಾಂ ಅವರ ಸೃಜನಾತ್ಮಕ ಚಿತ್ತಾರ, ಕಲ್ಲುಪ್ಪಿನಿಂದ ಚಿತ್ರಿಸಿದ ವರ್ಣಮಯ ಚಿತ್ರ.

ಆಳ್ವಾಸ್ ನುಡಿಸಿರಿ ಅಂಗವಾಗಿ ನಡೆಯುತ್ತಿರುವ ದ್ವಿತೀಯ ವರ್ಷದ ಆಳ್ವಾಸ್ ವಿಜ್ಞಾನ ಸಿರಿ 2018 ಕಾರ್ಯಕ್ರಮವು ಡಾ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯುತ್ತಿದ್ದು ಈ ಸಭಾಂಗಣದ ತಳ ಭಾಗವು ಅಬ್ದುಲ್ ಕಲಾಂರವರ ವರ್ಣರಂಜಿತ ಕಲ್ಲುಪ್ಪಿನ ಚಿತ್ರದಿಂದ ಆವೃತವಾಗಿದೆ. 

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ಗಣೇಶ್ ಆಚಾರ್ಯ ಎಂ. ಆರ್ ಈ ಕಲಾಕೃತಿಯ ಕರ್ತೃ. 15 ದಿನಗಳಿಗಿಂತಲೂ ಅಧಿಕ ದಿನ ಬಾಳಿಕೆ ಬರುವಂತಹ ಈ ಚಿತ್ರವನ್ನು ಸುಮಾರು 10 ರಿಂದ 14 ಗಂಟೆ ಕಾಲಾವಧಿಯನ್ನು ಬಳಸಿಕೊಂಡು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ 120 ಕಿಲೊ ಕಲ್ಲು ಉಪ್ಪು ಹಾಗೂವಿವಿಧ ವರ್ಣದ ರಂಗೋಲಿ ಹುಡಿಗಳನ್ನು ಬಳಸಲಾಗಿದೆ.

6 ವರ್ಷಗಳಿಂದ ಆಳ್ವಾಸ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಗಣೇಶ್ 15 ವರ್ಷಗಳಿಂದ ಈ ಪ್ರವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಕಲಾವಿದರ ಕುಟುಂಬದಲ್ಲೇ ಹುಟ್ಟಿ ಬೆಳೆದ ಗಣೇಶ್ ತನ್ನ ತಂದೆ ರಾಜಾಚಾರ್ಯರಿಂದ ಪ್ರಭಾವಿತರಾಗಿ ಈ ಚಿತ್ರ ಕಲೆಯನ್ನು ವೃತ್ತಿಯನ್ನಾಗಿಸದೆ ಪ್ರವೃತ್ತಿಯನ್ನಾಗಿಸಿ ಈ ಮೂಲಕವಾಗಿ ವಿನೂತನ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ದಾರದ ಮೂಲಕ ಚಿತ್ರ ರಚನೆ, ಆವೆ ಮಣ್ಣಿನ ಕಲಾಕೃತಿ, ಜಲ ಚಿತ್ರ, ತೈಲ ಚಿತ್ರ,  ತಾಂಜಾವೂರು ಶೈಲಿಯ ಚಿತ್ರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಹೈದರಾಬಾದ್, ಮುಂಬೈ, ಸೇರಿದಂತೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಚಿತ್ರ ಕಾರ್ಯಕ್ರಮವನ್ನು ನೀಡಿದ್ದಲ್ಲದೆ ಬಹರೈನ್, ದುಬೈಯಲ್ಲಿಯೂ ತನ್ನ ಪ್ರತಿಭೆಯ ಮೂಲಕ ಮಿಂಚಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News