‘ಭಾರತ್ ಮಾತಾ ಕಿ ಜೈ’ ಹೇಳದ ಉವೈಸಿ ಪಾಕ್ ನಲ್ಲಿ ಚುನಾವಣೆಗೆ ನಿಲ್ಲಲಿ: ಬಿಜೆಪಿ ನಾಯಕ ರಾಜಾ ಸಿಂಗ್

Update: 2018-11-15 11:18 GMT

ಹೊಸದಿಲ್ಲಿ, ನ.15: ಬಿಜೆಪಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ‘ಭಾರತ್ ಮಾತಾ ಕಿ ಜೈ’ ಹಾಗೂ ‘ವಂದೇ ಮಾತರಂ’ ಹೇಳದವರನ್ನು ತೆಲಂಗಾಣದಿಂದ ಹಾಗೂ ಭಾರತದಿಂದ ಹೊರಗೆ ಅಟ್ಟುವುದಾಗಿ ಬಿಜೆಪಿ ನಾಯಕ ರಾಜಾ ಸಿಂಗ್ ಹೇಳಿದ್ದು, ವಿವಾದದ ಧೂಳೆಬ್ಬಿಸಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಹಾಗೂ ಸಂಸದ ಅಸಾಸುದ್ದೀನ್ ಉವೈಸಿ ಅವರ ಮೇಲೂ ವಾಗ್ದಾಳಿ ನಡೆಸಿದರಲ್ಲದೆ ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಹೇಳಲು ಸಮಸ್ಯೆಯಿರುವ ಅವರನ್ನು ದೇಶದ್ರೋಹಿ ಎಂದು ಬಣ್ಣಿಸಿದ್ದಾರೆ.

“ತಾವು ಭಾರತ್ ಮಾತಾ ಕಿ ಜೈ ಹೇಳುವುದಿಲ್ಲ ಎಂದು ಉವೈಸಿ ತಮ್ಮ ಹಲವು ಭಾಷಣಗಳಲ್ಲಿ ಹೇಳಿದ್ದಾರೆ. ಅವರು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ಭಾರತ್ ಮಾತಾ ಕಿ ಜೈ ಎನ್ನುತ್ತಾರೆಯೇ ಎಂದು ಆ ದೇಶದ್ರೋಹಿಗಳಲ್ಲಿ ನಾನು ಕೇಳಲಿಚ್ಛಿಸುತ್ತೇನೆ. ಭಾರತ್ ಮಾತಾ ಕಿ ಜೈ ಘೋಷಣೆ ಕೇಳಲು ನಿಮ್ಮಿಂದ ಸಾಧ್ಯವಿಲ್ಲವೆಂದಾದರೆ ಹಾಗೂ ನೀವು ನಿಮ್ಮ ದೇಶವನ್ನು ಪ್ರೀತಿಸುವುದಿಲ್ಲವೆಂದಾದರೆ  ಇಂತಹ ದೇಶದ್ರೋಹಿಗಳು ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಚುನಾವಣೆ ಸ್ಪರ್ಧಿಸಬೇಕೆಂಬುದು ನನ್ನ ಸಲಹೆ'' ಎಂದು ಸಿಂಗ್ ಹೇಳಿದರು.

ಬಿಜೆಪಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ನಗರವನ್ನು ಭಾಗ್ಯನಗರ್ ಎಂದು ಮರುನಾಮಕರಣಗೊಳಿಸುವುದಾಗಿ ಈ ಹಿಂದೆ ಅವರು ಹೇಳಿದ್ದರು. ನಿಜಾಮರು ಹಾಗೂ ಮೊಘಲರ ಹೆಸರುಗಳಿರುವ ಪ್ರದೇಶಗಳಿಗೆ  ತೆಲಂಗಾಣ ಮತ್ತು ದೇಶಕ್ಕಾಗಿ ಹೋರಾಡಿದವರ ಹೆಸರುಗಳನ್ನಿಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News