ಪಡುಬಿದ್ರಿಯಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹ

Update: 2018-11-15 13:11 GMT

ಪಡುಬಿದ್ರಿ,ನ.15: ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿಯಲ್ಲಿ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಐದು ಲಕ್ಷದವರೆಗೆ ಸಾಲ ಹಾಗೂ ಐದು ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ಹಾಗೂ ಪುರುಷರ ಗುಂಪುಗಳಿಗೂ ನಾಲ್ಕು ಶೇಕಡಾ ಬಡ್ಡಿದರದಲ್ಲಿ ಸಾಲ ನೀಡಲು ಬದ್ದವಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.  

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಪಡುಬಿದ್ರಿ ಹಾಗೂ ಬೆಳಪು ಸಹಕಾರಿ ವ್ಯವಸಾಯಿಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಪಡುಬಿದ್ರಿಯಲ್ಲಿ ಗುರುವಾರ ನಡೆದ ಸಹಕಾರ ಸಂಸ್ಥೆಗಳ ಮೂಲಕ ಸರ್ಕಾರಿ ಯೋಜನೆಗಳು ಮತ್ತು ಆದಾಯೋತ್ಪನ್ನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ವಾಣಿಜ್ಯ ಬ್ಯಾಂಕ್‍ಗಳಲ್ಲಿ ಖಾತೆಯಿದ್ದರೂ ಸರ್ಕಾರದ ಕೆಲಸಗಳನ್ನು ಸಹಕಾರಿ ಕ್ಷೇತ್ರ ಸಮರ್ಥವಾಗಿ ನಿರ್ವಹಿಸುತ್ತಿದೆ. ಕೆಲವೊಂದು ಶರ್ತಗಳಂತೆ ಒಂದು ಲಕ್ಷದವರೆಗಿನ ಸಾಲಮನ್ನಾ ಮಾಡಲು ಸಹಕಾರಿ ಕ್ಷೇತ್ರ ಬದ್ಧವಿದೆ. ವಾಣಿಜ್ಯ ಬ್ಯಾಂಕ್‍ಗಳು ಸಾಲ ಮನ್ನಾ ಮಾಡಲು ಸಹಕಾರ ನೀಡಿಲ್ಲ. ಯಾರು ನಿಮಗಾಗಬಹುದು. ನಿಮ್ಮ ಖಾತೆ, ಹಣ ವಾಣಿಜ್ಯ ಬ್ಯಾಂಕ್‍ಗಳಲ್ಲಿ, ಆದರೆ ಸಹಾಯಧನ, ಸಾಲದ ಹಣ ಕೊಡುವುದು, ವಸೂಲಿ ಮಾಡುವುದು. ಸಹಕಾರಿ ಕ್ಷೇತ್ರ ಮಾತ್ರ. ಸರ್ಕಾರ ಯಾವುದೇ ಹಣವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಸಂಘದಲ್ಲಿರಿಸಿದರೂ, ಅದಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬದ್ಧವಿದೆ ಎಂದು ಹೇಳಿದರು. 

ಕಾಮನ್‍ ಸಾಫ್ಟ್ ವೇರ್: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳಿಗೆ ಡಿಸೆಂಬರ್ ಅಂತ್ಯದೊಳಗೆ ಸಹಕಾರ ಸಚಿವರ ಮೂಲಕ ಕಾಮನ್ ಸಾಪ್ಟ್ ವೇರ್ ನೀಡಲು ಯೋಜನೆ ರೂಪಿಸಲಾಗುವುದು. ನಮ್ಮ ಜಿಲ್ಲೆಯಲ್ಲಿ ಕಾಮನ್ ಸಾಪ್ಟ್ ವೇರ್ ಸಿದ್ದವಾಗಿ ಎರಡು ವರ್ಷಗಳಾಗಿದ್ದರೂ ಸರ್ಕಾರ ಅದನ್ನು ಕಾರ್ಯಗತ ಮಾಡಿಲ್ಲ. ಕಾಮನ್ ಸಾಪ್ಟ್ ವೇರ್‍ನಿಂದ ರೂಪೆ ಕ್ರೆಡಿಟ್ ಕಾರ್ಡ್‍ನ್ನು ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಅಗತ್ಯವಿರುವರಿಗೆ ನೀಡಲಾಗುವುದು. ಅದರಿಂದ ದೇಶದ ಯಾವುದೇ ಬ್ಯಾಂಕ್‍ಗಳಲ್ಲಿ ವ್ಯವಹರಿಸಲು ವ್ಯವಸ್ಥೆ ಮಾಡುವಂತಹ ಜಿಲ್ಲಾ ಬ್ಯಾಂಕ್ ದೇಶದಲ್ಲಿದ್ದರೆ ಅದು ನಮ್ಮ ಜಿಲ್ಲಾ ಬ್ಯಾಂಕ್ ಆಗಬೇಕೆಂಬ ಚಿಂತನೆ ಇದೆ. ಅದಕ್ಕೆ ಸರ್ಕಾರ ಒಪ್ಪಿಗೆ ನೀಡಿದರೂ ಆರ್‍ಬಿಐ ನೀಡಿಲ್ಲ. ನಾವು ಕೆಟ್ಟ ಸಾಲ ನೀಡುವುದಿಲ್ಲ. ಅದಕ್ಕೆ ನಮಗೆ ನೀಡುತ್ತಿಲ್ಲ ಎಂದು ಟೀಕಿಸಿದರು.

ಕಸವಿಲೇವಾರಿಗೆ ವಾಹನ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ವಜ್ರಮಹೋತ್ಸವದ ಸವಿನೆನಪಿಗಾಗಿ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಪಲಿಮಾರು ಗ್ರಾಮ ಪಂಚಾಯಿತಿಗಳಿಗೆ ತ್ಯಾಜ್ಯ ವಿಲೇವಾರಿಗಾಗಿ ರೂ. 21 ಲಕ್ಷ ವೆಚ್ಚದಲ್ಲಿ ನೀಡಿದ ನಾಲ್ಕು ಟಾಟಾ ಏಸ್ ವಾಹನಗಳನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಗ್ರಾಪಂ ಅಧ್ಯಕ್ಷರಿಗೆ ವಾಹನದ ಕೀಲಿಗಳನ್ನು ಹಸ್ತಾಂತರಿಸಿದರು.  

ಬೆಂಗಳೂರು ಆರ್‍ಐಸಿಎಂ ನಿವೃತ್ತ ನಿರ್ದೇಶಕ ಡಾ.ಎಸ್.ಎ. ಸಿದ್ದಾಂತಿ ದಿಕ್ಸೂಚಿ ಭಾಷಣ ಮಾಡಿದರು. ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕೃಷಿಕರಾದ ಥಾಮಸ್ ಡಿಸೋಜ, ಯು.ಎಸ್.ರಘುನಾಥ್, ರಮೇಶ್ ಶೆಟ್ಟಿ, ಗೌರಿ ಶೆಟ್ಟಿಯವರನ್ನು ಗೌರವಿಸಲಾಯಿತು. ಗಾಯತ್ರಿ ಪೂಜಾರಿ ಅವರಿಗೆ ಚೈತನ್ಯ ವಿಮಾ ಯೋಜನೆಯ ಸಾಂತ್ವಾನ ನಿಧಿಯನ್ನು ವಿತರಿಸಲಾಯಿತು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ವಿ ಅಮೀನ್, ಉಪಾಧ್ಯಕ್ಷ ವೈ. ಸುಕುಮಾರ್, ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಪುಟಾರ್ಡೋ, ತೆಂಕ ಎರ್ಮಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾ ಕುಮಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಯು.ಸಿ.ಶೇಖಬ್ಬ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ನಿರ್ದೇಶಕರಾದ ರಮೇಶ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಕೆಎಂಎಫ್ ನಿರ್ದೇಶಕ ದಿವಾಕರ ಶೆಟ್ಟಿ ಕಾಪು, ಕಟಪಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಬೆಳ್ಳೆ ಸಿಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಸುವರ್ಣ, ಬಡಗಬೆಟ್ಟು ಕೋಪರೇಟಿವ್ ಬ್ಯಾಂಕ್‍ನ ಜಯಕರ ಶೆಟ್ಟಿ ಇಂದ್ರಾಳಿ, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕಿ ಚಂದ್ರಪ್ರತಿಮಾ ಎಂ.ಜೆ.ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಬೆಳಪು ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶೋಧಾ ಕಾರ್ಯಕ್ರಮ ನಿರ್ವಹಿಸಿದರು, ಗಿರೀಶ್ ಪಲಿಮಾರ್ ವಂದಿಸಿದರು.

ನೀರವ್ ಮೋದಿಯಂತವರಿಗೆ ಸಹಕಾರಿ ಕ್ಷೇತ್ರ ಸಾಲ ನೀಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಹಳಷ್ಟು ಯೋಜನೆಗಳ ಹಣವನ್ನು ಯಾವತ್ತೂ ಸಹಕಾರಿ ಬ್ಯಾಂಕ್‍ಗಳಲ್ಲಿರಿಸದೆ ವಾಣಿಜ್ಯ ಬ್ಯಾಂಕ್‍ಗಳಲ್ಲಿಡಲಾಗುತ್ತಿದೆ. ವಾಣಿಜ್ಯ ಬ್ಯಾಂಕ್‍ಗಳ ಎನ್‍ಪಿಎ ಹೆಚ್ಚಿದ್ದರೂ ಅದನ್ನು ನಿರ್ವಹಿಸಲು ಸಾವಿರಾರು ಕೋಟಿಯನ್ನು ಸರ್ಕಾರ ವಾಣಿಜ್ಯ ಬ್ಯಾಂಕ್‍ಗಳಿಗೆ ನೀಡುತ್ತಿದೆ. ಎನ್‍ಪಿಎ ನಿಯಮಾವಳಿಯನ್ನು ಸಹಕಾರಿ ಕ್ಷೇತ್ರಕ್ಕೂ ಅನ್ವಯಿಸಿದ್ದರೂ, ನಾವು ಅದನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ ಎಂದು ರಾಜೇಂದ್ರ ಕುಮಾರ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News