ಅಗಲಿದ ಗಣ್ಯರ ನೆನಪಿಗೆ ಸಾಧಕರನ್ನು ಗುರುತಿಸುವುದು ಸಮಾಜಕ್ಕೆ ಮಾದರಿ: ಅಬ್ದುಲ್ ಅಹದ್ ಪುತ್ತಿಗೆ

Update: 2018-11-15 14:29 GMT

ಮಂಗಳೂರು, ನ.15: ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟ ದೇಶದ ಪ್ರಪ್ರಥಮ ಶಿಕ್ಷಣ ಮಂತ್ರಿ ಅಬ್ದುಲ್ ಕಲಾಂ ಆಝಾದ್ ಮತ್ತು ಸಮುದಾಯದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ ಮಾಜಿ ಸಚಿವ ಬಿ.ಎ.ಮೊಹಿದಿನ್ ಹಾಗೂ ಮೌಲಾನ ಇ.ಎಂ. ಶಾಫಿ ಅವರಂತಹ ಅಗಲಿದ ಗಣ್ಯರ ನೆನಪು ಮಾಡುವುದರೊಂದಿಗೆ ಅವರ ಹೆಸರಿನಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಪುತ್ತಿಗೆ ಅಭಿಪ್ರಾಯಪಟ್ಟರು.

ನಗರದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಗುರುವಾರ ಟ್ಯಾಲೆಂಟ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಮತ್ತು ಅಲ್‌ಹಾಜ್ ಬಿ.ಎ.ಮೊಹಿದಿನ್ ಹಾಗೂ ಅಲ್‌ಹಾಜ್ ಮೌಲಾನ ಇ.ಎಂ. ಶಾಫಿ ಸ್ಮಾರಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಬ್ದುಲ್ ಕಲಾಂ ಆಝಾದ್ ಶಿಕ್ಷಣ ತಜ್ಞ ಮಾತ್ರವಲ್ಲ, ಧಾರ್ಮಿಕ ವಿದ್ವಾಂಸರೂ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಅಪ್ಪಟ ದೇಶಪ್ರೇಮಿಯಾಗಿದ್ದರು. ಧರ್ಮದ ಆಧಾರದ ಮೇಲೆ ದೇಶ ವಿಭಜನೆಯನ್ನು ವಿರೋಧಿಸಿದವರಾಗಿದ್ದರು. ಅವರ ಚಿಂತನೆ, ಆದರ್ಶವನ್ನು ಬಿ.ಎ.ಮೊಹಿದಿನ್ ಮತ್ತು ಇ.ಎಂ. ಶಾಫಿ ಅಳವಡಿಸಿಕೊಂಡಿದ್ದರು. ಬಿ.ಎ. ಮೊಹಿದಿನ್ ಕರಾವಳಿಯ ಬ್ಯಾರಿ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ವಿವಿಧ ಮಸೀದಿಗಳಲ್ಲಿ ಖತೀಬರಾಗಿ, ಆಯುರ್ವೇದ ವೈದ್ಯರಾಗಿ, ಅರಬಿಕ್ ಮತ್ತು ಪರ್ಶಿಯನ್ ಭಾಷೆಯಲ್ಲಿ ಅಗಾಧ ಪಾಂಡಿತ್ಯವಿದ್ದ ಇ.ಎಂ. ಶಾಫಿ ಕೂಡಾ ಸರಳ ಜೀವನದೊಂದಿಗೆ ವಿಶಿಷ್ಟ ಚಿಂತನೆಯನ್ನು ಮೈಗೂಡಿಸಿಕೊಂಡವರಾಗಿದ್ದರು ಎಂದು ಡಿಸಿಪಿ ಅಬ್ದುಲ್ ಅಹದ್ ಪುತ್ತಿಗೆ ಹೇಳಿದರು.

ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರ ಪುತ್ರ ಎ.ಕೆ.ಮುಸ್ತಾಕ್ ಕಾರ್ಯಕ್ರಮ ಉದ್ಘಾಟಿಸಿದರು. ಟಿಆರ್‌ಎಫ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಜೀವಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಯು.ಟಿ.ಇಫ್ತಿಕಾರ್ ಅಲಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಆಝಾದ್ ಗ್ರೂಪ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್ ಭಾಗವಹಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಜಮೀಯ್ಯತುಲ್ ಫಲಾಹ್‌ನ ಸ್ಥಾಪಕ ಇಕ್ಬಾಲ್ ಯೂಸುಫ್, ಫತೇ ಮುಹಮ್ಮದ್ ಪುತ್ತಿಗೆ ಉಪಸ್ಥಿತರಿದ್ದರು. ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹಮೀದ್ ಕಣ್ಣೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಸೀಮ್ ಸಜಿಪ ವಂದಿಸಿದರು. ಶಾಹಿದ್ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪ್ರದಾನ: ಅಲ್‌ಹಾಜ್ ಬಿ.ಎ.ಮೊಹಿದಿನ್ ಸ್ಮಾರಕ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದ ಸಾಧಕರಾದ ಮುಹಮ್ಮದ್ ತಾಜುದ್ದೀನ್ ರಹ್ಮಾನಿ (ಉತ್ತಮ ಖತೀಬ್), ಯಾಕೂಬ್ ಕೊಯ್ಯೂರು (ಉತ್ತಮ ಶಿಕ್ಷಕ) ಉಮರುಲ್‌ಫಾರೂಕ್ ದಾರಿಮಿ (ಉತ್ತಮ ಮದ್ರಸ ಉಸ್ತಾದ್), ಅಂಜುಮಾನ್ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ ಜೋಕಟ್ಟೆ (ಮಾದರಿ ಶಿಕ್ಷಣ ಸಂಸ್ಥೆ), ಮಹದನುಲ್ ಉಲೂಂ ಮದ್ರಸ ಕಲ್ಲೇಗ (ಉತ್ತಮ ಪರಿಸರ ಸ್ನೇಹಿ ಮದ್ರಸ), ಡಾ. ಉಮರ್ ಬೀಜದಕಟ್ಟೆ (ಪರವಾಗಿ ಅಬೂಬಕರ್ ಕನ್ನಂಗಾರ್) ಮತ್ತು ಮೋಹನ್ ರೈ ವಾಲೆಮುಂಡೊವು ಹಾಗೂ ರೋಹಿಯ್ ಸಂಕ್ಟಸ್ (ಸದ್ಭಾವನಾ), ವಿ. ಮುಹಮ್ಮದ್ (ಜೀವರಕ್ಷಕ) ಅವರಿಗೆ ಪ್ರದಾನ ಮಾಡಲಾಯಿತು.

ಅಲ್‌ಹಾಜ್ ಇ.ಎಂ.ಶಾಫಿ ಸ್ಮಾರಕ ಪ್ರಶಸ್ತಿಯನ್ನು ಫೈವ್ ಸ್ಟಾರ್ ಯಂಗ್ ಬಾಯ್ಸ್ (ರಿ) ಅಡ್ಡೂರು, ಸಫರ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್ (ರಿ) ಮಂಚಿಲ ಉಳ್ಳಾಲ, ಮಿಲೇನಿಯಂ ಬ್ರದರ್ಸ್‌ ಕೊಲ್ಪೆ (ಸಮಾಜ ಸೇವೆಯೊಂದಿಗೆ ಉತ್ತಮ ಸ್ಪೋರ್ಟ್ಸ್ ಕ್ಲಬ್ ಪ್ರಶಸ್ತಿ), ಸೈಯದ್ ಹಾಶಿಂ ಚೆರಿಕೋಯ ತಂಙಳ್ (ವಿಶೇಷ ಪ್ರಶಸ್ತಿ) ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಪ್ರಥಮ ಶಿಕ್ಷಣ ಮಂತ್ರಿ ಅಬ್ದುಲ್ ಕಲಾಂ ಆಝಾದ್‌ರ ಭಾವಚಿತ್ರ ಅನಾವರಣ ಮಾಡಲಾಯಿತು. ಅಲ್ಲದೆ 5 ಸರಕಾರಿ ಶಾಲೆಗಳಿಗೆ ಈ ಭಾವಚಿತ್ರವನ್ನು ಹಸ್ತಾಂತರಿಸುವ ಬಗ್ಗೆ ಘೋಷಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News