ಪೊಲೀಸ್ ಬಿಗಿಬಂದೋಬಸ್ತ್ ನಲ್ಲಿ ಬಂಟ್ವಾಳ ಇಂದಿರಾ ಕ್ಯಾಂಟೀನ್

Update: 2018-11-15 14:54 GMT

ಬಂಟ್ವಾಳ, ನ. 15: ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್‍ಗೆ ಕಂಪೌಂಡ್ ನಿರ್ಮಿಸುವ ವಿಚಾರ ರಾಜಕೀಯ ಸಂಘರ್ಷಕ್ಕೆ ತಿರುವು ಪಡೆದು ತಾರಕಕ್ಕೇರಿರುವ ಹಿನ್ನಲೆಯಲ್ಲಿ ಗುರುವಾರ ಬ್ಯಾರಿಕೇಡ್ ಅಡ್ಡ ಇರಿಸಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ವಿವಾದ ಇತ್ಯರ್ಥಕ್ಕೆ ಎರಡು ದಿನಗಳ ಕಾಲಾವಕಾಶವನ್ನು ಮಂಗಳೂರು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಕೋರಿರುವ ಹಿನ್ನಲೆಯಲ್ಲಿ ಸದ್ಯಕ್ಕೆ ಅವರಣಗೋಡೆ ನಿರ್ಮಾಣದ ಕಾಮಗಾರಿ ಸ್ಥಗಿತಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬ್ಯಾರಿಕೇಡ್ ಅಡ್ಡ ಇರಿಸಿ ಪೊಲೀಸ್ ಪಹರೆ ಹಾಕಲಾಗಿದೆ. ಸದ್ಯ ಇಂದಿರಾ ಕ್ಯಾಂಟೀನ್ ಆವರಣಗೋಡೆ ಕಾಮಗಾರಿ ಸ್ಥಗಿತಗೊಂಡಿದೆ.

ಬಿ.ಸಿ.ರೋಡ್ ಮಿನಿ ವಿಧಾನಸೌಧದ ಪಕ್ಕ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದ್ದು, ಇದಕ್ಕೆ ಕಂಪೌಂಡ್ ನಿರ್ಮಿಸುವ ಸಂದರ್ಭ ರಸ್ತೆಯನ್ನು ಅತಿಕ್ರಮಿಸಲಾಗಿದೆ ಎಂದು ಆರೋಪಿಸಿ, ಶಾಸಕ ರಾಜೇಶ್ ನಾಯ್ಕ್  ಪುರಸಭೆಯ ಸ್ಥಳೀಯ ಸದಸ್ಯ ಎ.ಗೋವಿಂದ ಪ್ರಭು ನೇತೃತ್ವದಲ್ಲಿ  ಪ್ರತಿರೋಧ ವ್ಯಕ್ತಪಡಿಸಿದ್ದರಲ್ಲದೆ, ಈ ಅವರಣಗೋಡೆ ತೆರವುಗೊಳಿಸುವಂತೆ ಪಟ್ಟುಹಿಡಿದು ಪ್ರತಿಭಟನೆ ನಡೆಸಿದ್ದರು.    

ಸಂಜೆಯ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಿನಿ ವಿಧಾನಸೌಧ ಪ್ರವೇಶಿಸಿ ಬಿಜೆಪಿಯ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಅವರ ಮಿತ್ರ ಪಕ್ಷ ಜೆಡಿಎಸ್ ಕೂಡ ಸಾಥ್ ನೀಡಿತ್ತು. ಅಷ್ಟರಲ್ಲಿ ಸೌಧದ ಇನ್ನೊಂದು ಗೇಟಿನ ಬಳಿ  ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿಭಟನೆ ಕುಳಿತಿದ್ದರು. ಆಗ ಉಭಯ ಪಕ್ಷದ ಮಧ್ಯ ಸಂಘರ್ಷದ ವಾತವರಣ ಉಂಟಾಗಿತ್ತು. ಈ ಹಂತದಲ್ಲಿ ಬಿಗುವಿನ ವಾತಾವರಣ ತಲೆದೋರಿತ್ತು. ಪರಿಸ್ಥಿತಿ ಬಿಗಡಾಯಿಸುವ ಮುನ್ಸೂಚನೆ ದೊರೆತ ಬಂಟ್ವಾಳ ಎಎಸ್ಪಿ ಋಷಿಕೇಶ್ ಸೋನಾವಣೆ, ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್ ಅವರು ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಮನವೊಲಿಸಿ ಸೌಧದ ಗೇಟಿನಿಂದ ಚದುರಿಸಿ ಗೇಟ್ ಮುಚ್ಚುವ ಮೂಲಕ ಪರಿಸ್ಥಿತಿಯನ್ನು ಹದ್ದು ಬಸ್ತಿಗೆ ತಂದಿದ್ದರು.

ಸಮಸ್ಯೆ ಶುಕ್ರವಾರ ಇತ್ಯರ್ಥ?:
ಬುಧವಾರ ಸಂಜೆ ಮತ್ತೆ ಕ್ಯಾಂಟೀನ್ ಕದನ ಉಲ್ಬಣಿಸಿದ ಹಿನ್ನಲೆಯಲ್ಲಿ ಮತ್ತೆ ಮಂಗಳೂರು ಸಹಾಯಕ ಕಮಿಷನರ್ ಬಿ.ಸಿ.ರೋಡಿಗೆ ದೌಡಾಯಿಸಿ ಮಾಜಿ ಸಚಿವ ರಮಾನಾಥ ರೈ ಅವರೊಂದಿಗೆ ಸಂಧಾನಕ್ಕೆ ಕುಳಿತರು.
ಬೆಳಿಗ್ಗೆ ತಹಶೀಲ್ದಾರರ ಕೊಠಡಿಯಲ್ಲಿ ಬಾಗಿಲು ಮುಚ್ಚಿ ಮಾತುಕತೆ ನಡೆಸಿದ ಸಹಾಯಕ ಕಮಿಷನರ್ ಸಂಜೆ ಬಾಗಿಲು ತೆರೆದು ಪ್ರತಿಭಟನಾಕಾರರಿಗೆಲ್ಲಾ ಒಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಮಾತುಕತೆ ನಡೆಸಿದರು.
ಈ ಸಂದರ್ಭ ಪ್ರತಿಭಟನಾಕಾರರು ಹಾಜರಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ವಿವಾದ ಇತ್ಯರ್ಥಕ್ಕೆ ಎರಡು ದಿನಗಳ ಕಾಲಾವಕಾಶ ಕೇಳಿದ ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಅವರು, ಶುಕ್ರವಾರ ಕ್ಯಾಂಟೀನ್ ಅವರಣಗೋಡೆಯ ಕುರಿತ ಸ್ಪಷ್ಟ ನಿಲುವು ಪ್ರಕಟಿಸಲಿದ್ದಾರೆ.    

ಇಂದಿರಾ ಕ್ಯಾಂಟೀನ್ ಹೋರಾಟಕ್ಕೆ ಜೆಡಿಎಸ್ ಬೆಂಬಲ
ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್‍ಗೆ ಕಂಪೌಂಡ್ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿ ಎದ್ದಿರುವ ಕಾಂಗ್ರೆಸ್ ಹೋರಾಟಕ್ಕೆ ಬಂಟ್ವಾಳ ಜೆಡಿಎಸ್ ಬೆಂಬಲ ಸೂಚಿಸಿದ್ದು, ಸಮಸ್ಯೆ ಇತ್ಯರ್ಥವಾಗುವವರೆಗೂ ಕಾನೂನಾತ್ಮಕ ಹೋರಾಟಕ್ಕೆ ಸಾಥ್ ನೀಡಲಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಅವರು ತಿಳಿಸಿದ್ದಾರೆ. 

ಇಂದಿರಾ ಕ್ಯಾಂಟೀನ್ ವಿಚಾರಕ್ಕೆ ಸಂಬಂಧಿಸಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇದೊಂದು ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಬಂಟ್ವಾಳ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ಅಗತ್ಯವಾಗಿ ಬೇಕಾಗಿದೆ. ಈ ವಿಚಾರದಲ್ಲಿ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಇದು ಖಂಡನೀಯ ಎಂದವರು ಪ್ರತಿಕ್ರಿಯಿಸಿದ್ದಾರೆ.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಶಫೀ, ಜೆಡಿಎಸ್ ಬಂಟ್ವಾಳ ಕ್ಷೇತ್ರಾಧ್ಯಕ್ಷ ಬಿ.ಮೋಹನ್, ಯುವ ಘಟಕದ ಸವಾದ್ ಹಾಗೂ ಸತ್ತಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News