ನವಮಂಗಳೂರು ಬಂದರಿನ ಕ್ರೂಸ್ ಲಾಂಜ್‌ನಲ್ಲಿ ಪ್ರವಾಸಿ ಮಾಹಿತಿ ಕೇಂದ್ರ ಉದ್ಘಾಟನೆ

Update: 2018-11-15 15:09 GMT

ಮಂಗಳೂರು, ನ.15: ನವಮಂಗಳೂರು ಬಂದರಿನ ಕ್ರೂಸ್ ಲಾಂಜ್‌ನಲ್ಲಿ ಪ್ರವಾಸಿ ಮಾಹಿತಿ ಕೇಂದ್ರವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಗುರುವಾರ ಉದ್ಘಾಟಿಸಿದರು.

ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ, ನವಮಂಗಳೂರು ಬಂದರಿನ ಅಧಿಕಾರಿಗಳೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಪೂರಕ ವ್ಯವಸ್ಥೆ ಸಂಬಂಧ ಮಾತುಕತೆ ನಡೆಸಿದರು.

ಜಿಲ್ಲೆಯ ಬಂದರಿಗೆ ಪ್ರತಿವರ್ಷ 30ಕ್ಕೂ ಅಧಿಕ ಕ್ರೂಸ್‌ಗಳಲ್ಲಿ 35,000ಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಫ್ರಾನ್ಸ್, ಜರ್ಮನ್, ರಷ್ಯಾ ಮುಂತಾದ ದೇಶಗಳಿಂದ ಆಗಮಿಸುತ್ತಾರೆ. ಪ್ರಸಕ್ತ ಸಾಲಿನ ವೇಳಾಪಟ್ಟಿಯಂತೆ AIDAvita, Celebrity Constellation, Costa Neoriviera, Seven seas navigator, Silver Shadow, Insignia ಹಾಗೂ ಇನ್ನಿತರ ಕ್ರೂಸ್ ಶಿಪ್‌ಗಳಲ್ಲಿಮಂಗಳೂರಿಗೆ ಆಗಮಿಸಲಿರುವರು.

ಈ ಮಾದರಿ ಕಿಯೋಸ್ಕ್ ದೇಶದಲ್ಲೇ ಪ್ರಥಮವಾಗಿದ್ದು, ಮಾಹಿತಿ ಕೇಂದ್ರದ ಸಂಪೂರ್ಣ ಸದ್ಬಳಕೆಗೆ ಕಾರ್ಯಯೋಜನೆ ರೂಪಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವಿದೇಶಿ ಪ್ರವಾಸಿಗರು ಒಂದು ದಿನ ಜಿಲ್ಲೆಯ ಕದ್ರಿ ದೇವಾಲಯ, ಕುದ್ರೋಳಿ, ಮಂಗಳಾದೇವಿ, ಸೈಂಟ್ ಅಲೋಶಿಯಸ್ ಚಾಪೆಲ್, ಮಿಲಾಗ್ರಿಸ್ ಚರ್ಚ್, ಸುಲ್ತಾನಬತ್ತೇರಿ, ತಣ್ಣೀರು ಬಾವಿಬೀಚ್, ಕುಲಶೇಖರ ಕ್ಯಾಶು ಫ್ಯಾಕ್ಟರಿ, ನಗರದ ಮಾಲ್‌ಗಳು, ಮೂಡುಬಿದಿರೆ ಸಾವಿರಕಂಬದ ಬಸದಿ, ಸೋನ್ಸ್ ಫಾರಂ, ಪಿಲಿಕುಳ ನಿಸರ್ಗಧಾಮಗಳ ವೀಕ್ಷಣೆಗೆ ತೆರಳುತ್ತಾರೆ.

ಪ್ರಸಕ್ತ ಸಾಲಿನ ಮೊದಲ ಕ್ರೂಸ್ ಶಿಪ್ AIDAvita ದ ಪ್ರವಾಸಿಗರಿಗೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಸುಸಜ್ಜಿತವಾದ ಪ್ರವಾಸಿ ಮಾಹಿತಿ ಕೇಂದ್ರದ ಮೂಲಕ ಮಾಹಿತಿ ಹಾಗೂ ಕನಿಷ್ಠ ದರಗಳಲ್ಲಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಪ್ರೀಪೈಡ್ ಟ್ಯಾಕ್ಸಿ ಕೌಂಟರ್‌ಗಳನ್ನು ಒದಗಿಸಲಾಗುವುದು. ಇದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇನ್ನಷ್ಟು ಬೆಳೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಉದಯ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.

ಇಟಲಿಯಿಂದ ಆಗಮಿಸಿದ AIDAvita ಕ್ರೂಸ್ ಶಿಪ್‌ನಲ್ಲಿ ಆಗಮಿಸಿದ ಸುಮಾರು 650ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸ್ಥಳೀಯ ಸಾಸ್ಕೃತಿಕ ಕಲೆಯಾದ ಯಕ್ಷಗಾನ, ಚೆಂಡೆ ತಾಳಗಳೊಂದಿಗೆ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ನವಮಂಗಳೂರು ಬಂದರಿನ ಟ್ರಾಫಿಕ್ ಮ್ಯಾನೇಜರ್‌ಗಳಾದ ವೈ.ಆರ್. ಬೆಳಗಲ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ್ ಶೆಟ್ಟಿ, ಬಂದರಿನ ಸಿಬ್ಬಂದಿ, ವಿವಿಧ ಟೂರ್ ಆ್ಯಂಡ್ ಟ್ರಾವೆಲ್ಸ್‌ನ ಆಪರೇಟರ್‌ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News