ಉಡುಪಿ-ಮಣಿಪಾಲ ರಸ್ತೆ ಸಂಚಾರದಲ್ಲಿ ಬದಲಾವಣೆ

Update: 2018-11-15 15:21 GMT

ಉಡುಪಿ, ನ.15: ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಲ್ಪೆ- ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ 169ಎ ಚತುಷ್ಪಥ ಕಾಮಗಾರಿಯ ಅಂಗವಾಗಿ ಪ್ರಸ್ತುತ ಉಡುಪಿಯ ಕಡಿಯಾಳಿ ಜಂಕ್ಷನ್‌ನಿಂದ ಇಂದ್ರಾಳಿ ಪರ್ಕಳದವರೆಗಿನ ಕಾಮಗಾರಿಯನ್ನು ಕಳೆದೊಂದು ತಿಂಗಳಿನಿಂದ ನಡೆಸುತ್ತಿದೆ. ಸದ್ಯಕ್ಕೆ ಕಡಿಯಾಳಿಯಿಂದ ಎಂಜಿಎಂವರೆಗೆ ಪೂರ್ವಾಭಿಮುಖ ರಸ್ತೆ ಕಾಮಗಾರಿ ಕೆಲಸ ಪ್ರಗತಿಯಲ್ಲಿದ್ದು, ಕಡಿಯಾಳಿ ಜಂಕ್ಷನ್‌ನಿಂದ ಮಣಿಪಾಲ ಕಡೆ ಹೋಗುವ ಹಾಗೂ ಬರುವ ವಾಹನಗಳಿಗೆ ದ್ವಿಮುಖ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಆದರೆ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ತುರ್ತು ಸಂದರ್ಭಗಳಲ್ಲಿ ಮಣಿಪಾಲ ಆಸ್ಪತ್ರೆಗೆ ಅಂಬುಲೆನ್ಸ್‌ಗಳ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿದೆ. ಬಸ್ಸುಗಳು ಅಲ್ಲಲ್ಲಿ ಪ್ರಯಾಣಿಕರನ್ನು ಹತ್ತಿಸುವ ಹಾಗೂ ಇಳಿಸುವ ಕಾರಣ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಕಾಮಗಾರಿ ಎರಡು ಕಡೆಗಳಿಂದಲೂ ಮುಗಿಯಲು ಮೂರು ತಿಂಗಳಿಗೂ ಅಧಿಕ ಸಮಯ ಬೇಕಾಗಿರುವುದರಿಂದ, ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಪೊಲೀಸ್ ಅಧಿಕಾರಿಗಳು, ಉಡುಪಿ ಬಸ್ ಎಜೆಂಟ್ ಸಂಘ, ಉಡುಪಿ ಸಿಟಿ ಬಸ್ ಚಾಲಕ-ಮಾಲಕರ ಸಂಘ ಹಾಗೂ ಕೆಎಸ್ಸಾರ್ಟಿಸಿ ನಿಗದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗಿದ್ದು, ವಾಹನಗಳ ಸಂಚಾರ ಮಾರ್ಗ ಬದಲಿಸಲು ಅವರಿಂದ ಸಲಹೆ ಸೂಚನೆ ಪಡೆದು ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೊಲೀಸ್ ಅಧೀಕ್ಷಕರ ವರದಿಯನ್ನು ಆಧರಿಸಿ ರಾಷ್ಟ್ರೀಯ ಹೆದ್ದಾರಿ 169ಎಯ ಉಡುಪಿ-ಮಣಿಪಾಲ ರಸ್ತೆಯಲ್ಲಿ ಖಾಸಗಿ ಹಾಗೂ ಸರಕಾರಿ ಬಸ್ಸುಗಳ ಸಂಚಾರ ವ್ಯವಸ್ಥೆಯಲ್ಲಿ ಈ ಕೆಳಗಿನಂತೆ ತಾತ್ಕಾಲಿಕ ಬದಲಾವಣೆ ಮಾಡಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.

►ಉಡುಪಿ ಕಡೆಯಿಂದ ಮಣಿಪಾಲ, ಕಾರ್ಕಳ, ಶಿವಮೊಗ್ಗ ಮುಂತಾದ ಕಡೆಗಳಿಗೆ ತೆರಳುವ ಬಸ್ಸುಗಳು ಎಂದಿನಂತೆ ಸರ್ವಿಸ್ ಬಸ್ ನಿಲ್ದಾಣದಿಂದ ರಾ.ಹೆ.169ಎಯ ಸಿಟಿ ಬಸ್ ನಿಲ್ದಾಣ, ಕಲ್ಸಂಕ ಜಂಕ್ಷನ್, ಕಡಿಯಾಳಿ, ಎಂಜಿಎಂ ಮಾರ್ಗವಾಗಿ ಸಂಚರಿಸಬೇಕು.
►ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಬಸ್ಸುಗಳು ಎಂಜಿಎಂ, ಸುಧೀಂದ್ರ ತೀರ್ಥ ಮಾರ್ಗದಿಂದ ಬಲ ತಿರುವು ಪಡೆದು ಶಾರದಾ ಕಲ್ಯಾಣ ಮಂಟಪದಿಂದ ಬೀಡಿನಗುಡ್ಡೆ, ಮಿಷನ್ ಕಾಂಪೌಂಡ್, ಲಯನ್ಸ್ ಸರ್ಕಲ್ ಮಾರ್ಗವಾಗಿ ಬಸ್ ನಿಲ್ದಾಣ ತಲುಪಬೇಕು.
►ಉಡುಪಿಯಿಂದ ಮಣಿಪಾಲಕ್ಕೆ ಹೋಗುವ ಇತರೇ ವಾಹನಗಳು ಏಕಮುಖ ಸಂಚಾರ ಬದಲಿಗೆ ದ್ವಿಮುಖ ಸಂಚಾರ ವ್ಯವಸ್ಥೆ ಮಾಡುವುದು.
►ಪಶ್ಚಿಮಾಭಿಮುಖವಾಗಿ ಅಂದರೆ ಮಣಿಪಾಲದಿಂದ ಉಡುಪಿ ಕಡೆಗೆ ರಸ್ತೆ ಕಾಮಗಾರಿ ಪ್ರಾರಂಭಗೊಂಡ ನಂತರ ಉಡುಪಿಯಿಂದ ಮಣಿಪಾಲಕ್ಕೆ ರಾ.ಹೆ.169ಎ ಯಲ್ಲಿ ಹೋಗುವ ವಾಹನಗಳಿಗೆ ದ್ವಿಮುಖ ಸಂಚಾರ ವ್ಯವಸ್ಥೆ ಮಾಡುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News