​ವಿಶ್ವ ಮಧುಮೇಹ ದಿನ: ನೀಲಿ ಬಣ್ಣದಲ್ಲಿ ಕಂಗೊಳಿಸಿದ ಕೆಎಂಸಿ

Update: 2018-11-15 15:24 GMT

ಮಣಿಪಾಲ, ನ.15: ವಿಶ್ವ ಮಧುಮೇಹ ದಿನದಂದು ಮಧುಮೇಹದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ನ.14ರ ಬುಧವಾರ ಸಂಜೆ ಮಣಿಪಾಲದ ಕೆಎಂಸಿ ಸಂಪೂರ್ಣ ನೀಲಿ ಬಣ್ಣದಿಂದ ಕಂಗೊಳಿಸಿತು. ವಿಶ್ವದಾದ್ಯಂತ ಮಧುಮೇಹದ ಬಗ್ಗೆ ಜನಜಾಗೃತಿಗಾಗಿ 2007ರಿಂದ ವಿವಿಧ ಸಾಂಪ್ರದಾಯಿಕ ಕಟ್ಟಡ, ನಕಾಶೆಗಳನ್ನು ನೀಲಿ ಬಣ್ಣದಲ್ಲಿ ಬೆಳಗಲಾಗುತ್ತಿದೆ.

ಬುಧವಾರ ಸಂಜೆ 6:30ರಿಂದ ಕಸ್ತೂರ್‌ಬಾ ಆಸ್ಪತ್ರೆ ನೀಲಿ ಬಣ್ಣದಲ್ಲಿ ಮಿಂದೆದ್ದಿತು. ಕೆಎಂಸಿಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ್ ಹೆಗ್ಡೆ ಜಂಟಿಯಾಗಿ ಇದನ್ನು ಉದ್ಘಾಟಿಸಿದರು. ಕೆಎಂಸಿಯ ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥೆ ಡಾ. ಸಹನಾ ಶೆಟ್ಟಿ ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.

ಈ ನೀಲಿ ದೀಪಗಳು ಮಧುಮೇಹದಿಂದ ಪಾರಾಗಲು ನಡೆಸುವ ಪ್ರಯತ್ನದ ದ್ಯೋತಕವಾಗಿದೆ.ಮಧುಮೇಹವನ್ನು ಜಾಗತಿಕವಾಗಿ ನೀಲಿಬಣ್ಣದ ವೃತ್ತದಿಂದ ಗುರುತಿಸಲಾಗುತ್ತದೆ.

ಉಚಿತ ಮಧುಮೇಹ ತಪಾಸಣಾ ಶಿಬಿರ: ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಎಂಡೋಕ್ರೈನಾಲಜಿ ವಿಭಾಗ ಮತ್ತು ಕಸ್ತೂರ್ಬಾ ಆಸ್ಪತ್ರೆ ಉಚಿತ ತಪಾಸಣಾ ಶಿಬಿರವನ್ನು ನ.14ರಂದು ಆಯೋಜಿಸಿತ್ತು. ಸುಮಾರು 2500 ಜನರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಇವರಲ್ಲಿ ಸುಮಾರು 242 ಮಂದಿಗೆ ಮಧುಮೇಹಕ್ಕೆ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಯಿತು. ಈ ಶಿಬಿರವನ್ನು ಜಿಲ್ಲೆಯ 8 ಸ್ಥಳಗಳಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಸಿ ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥೆ ಡಾ. ಸಹಾನಾ ಶೆಟ್ಟಿ, ಪ್ರತೀ ಇಬ್ಬರಲ್ಲಿ ಒಬ್ಬರು ಮಧುಮೇಹಕ್ಕೆ ಚಿಕಿತ್ಸೆ ಪಡೆಯದೇ ಸುಮ್ಮನಿರುತ್ತಾರೆ. ಪ್ರತೀ ಐದರಲ್ಲಿ ನಾಲ್ಕು ಮಂದಿ ಸರಿಯಾಗಿ ಮಧುಮೇಹದ ಎಚ್ಚರಿಕೆಯ ಚಿಹ್ನೆಯನ್ನು ಗುರುತಿಸಲು ವಿಫಲರಾಗುತ್ತಾರೆ ಎಂಬುದು ವಿಶ್ವ ಮಧುಮೇಹ ಒಕ್ಕೂಟದ ಅಧ್ಯಯನದಿಂದ ತಿಳಿದುಬರುತ್ತದೆ ಎಂದರು.

ಇದು ನಿಜವಾಗಲೂ ಕಳವಳಕಾರಿ ವಿಷಯ. ಈ ರೀತಿ ಚಿಕಿತ್ಸೆ ಮಾಡದಿರುವ ಮಧುಮೇಹವು ಪ್ರಾಣಾಂತಿಕವಾಗಿರುತ್ತದೆ. ಇದರಿಂದ ಹೃದಯ ಸಮಸ್ಯೆ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ, ಕುರುಡುತನ ಮತ್ತು ಕಾಲು ಕತ್ತರಿಸುವಿಕೆ ಕೂಡಾ ಉಂಟಾಗಬಹುದು. ಆರಂಭಿಕ ಹಂತದ ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆಯಿಂದ ಮಧುಮೇಹದ ದುಷ್ಪರಿಣಾಮ ತಡೆಯಬಹುದು. ಶೇ.8ರಷ್ಟು ಮಧುಮೇಹವನ್ನು ಜೀವನಶೈಲಿಯ ನಿಯಂತ್ರಣದಿಂದ ತಡೆಯಬಹುದು ಎಂದು ಹೇಳಿದರು.

ಮಣಿಪಾಲದ ಟ್ಯಾಕ್ಸಿ ನಿಲ್ದಾಣದ ಬಳಿ, ಸಿಟಿ ಬಸ್ ನಿಲ್ದಾಣದ ಹಿಂದೆ, ಉಡುಪಿಯ ಬೋರ್ಡ್ ಹೈಸ್ಕೂಲ್, ಸರ್ವೀಸ್ ಬಸ್ ನಿಲ್ದಾಣದ ಎದುರು, ಬ್ರಹ್ಮಾವರದ ಬಸ್ ನಿಲ್ದಾಣದ ಬಳಿ, ಟ್ಯಾಕ್ಸಿ ನಿಲ್ದಾಣದ ಎದುರು, ಕುಂದಾಪುರ ತಾಲೂಕು ಕಚೇರಿಯ ಬಳಿ, ಶಾಸ್ತ್ರಿ ವೃತ್ತ, ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆ, ಹಾಗೂ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಮತ್ತು ಉಡುಪಿಯ ರೈಲ್ವೇ ನಿಲ್ದಾಣದಲ್ಲಿ ಮಧುಮೇಹ ತಪಾಸಣಾ ಶಿಬಿರಗಳನ್ನು ಆಯೋಜಿಸಲಾ ಗಿತ್ತು ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News