ಉಡುಪಿ: ಕಾಂಗ್ರೆಸ್‌ನ ‘ಪ್ರಿಯದರ್ಶಿನಿ’ ಸ್ಕ್ವಾಡ್ ಉದ್ಘಾಟನೆ

Update: 2018-11-15 15:31 GMT

ಉಡುಪಿ, ನ.15: ದೇಶಾದ್ಯಂತ ಇತ್ತೀಚೆಗೆ ಆರಂಭಿಸಲಾಗಿರುವ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸಹ ಸಂಘಟನೆಯಾಗಿರುವ ‘ಪ್ರಿಯದರ್ಶಿನಿ’ ಸ್ಕ್ವಾಡ್‌ನ ಉಡುಪಿ ಜಿಲ್ಲಾ ಘಟಕವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಮಹಿಳಾ ಘಟಕ ವತಿಯಿಂದ ಗುರುವಾರ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಉದ್ಘಾಟಿಸಲಾಯಿತು.

ಪ್ರಿಯದರ್ಶಿನಿ ಸ್ಕ್ವಾಡ್‌ನ ರಾಜ್ಯ ಘಟಕದ ಅಧ್ಯಕ್ಷೆ ಭವ್ಯ ನರಸಿಂಹ ಮೂರ್ತಿ ಜಿಲ್ಲಾ ಸ್ಕ್ವಾಡ್‌ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಈಗಾಗಲೇ ಮಹಿಳಾ ಘಟಕ, ಯುವ ಘಟಕಗಳು ಇವೆ. ಆದರೆ ಪ್ರಿಯದರ್ಶಿನಿ ಘಟಕದ ವಿಶೇಷವೆಂದರೆ ಯುವ ಮಹಿಳಾ ಕಾರ್ಯಕರ್ತರನ್ನು ಪಕ್ಷದ ಮುಖ್ಯವಾಹಿನಿಗೆ ತರುವುದು ಮತ್ತು ಪರಿಣಾಮಕಾರಿ ಸಾಮಾಜಿಕ ಬದಲಾವೆಗೆ ನಾಂದಿ ಹಾಡುವುದಾಗಿದೆ ಎಂದರು.

ಪ್ರಿಯದರ್ಶಿನಿ ಸ್ಕ್ವಾಡ್‌ಗೆ ನಾಲ್ಕು ಪ್ರಮುಖ ಗುರಿಗಳಿವೆ. ಆರೋಗ್ಯ, ಶಿಕ್ಷಣ, ಸುರಕ್ಷತೆ, ಉದ್ಯೋಗ ವಿಚಾರಗಳಲ್ಲಿ ಹೆಣ್ಣುಮಕ್ಕಳನ್ನು ಜಾಗೃತಗೊಳಿಸುವ ಉದ್ದೇಶವನ್ನು ಪ್ರಿಯದರ್ಶಿನಿ ಹೊಂದಿದೆ ಎಂದರು. ರಾಜ್ಯದ ಪ್ರತೀ ಜಿಲ್ಲಾ ಘಟಕಗಳಲ್ಲಿ ಸುಮಾರು 600ರಿಂದ 700 ಸದಸ್ಯರು ಹೊಂದುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿ, ಪ್ರತೀ ತಾಲೂಕು ಮಟ್ಟದಲ್ಲಿ ಒಬ್ಬರಿಗೆ ಜವಾಬ್ಧಾರಿಯನ್ನು ನೀಡಲಾಗುತ್ತದೆ ಎಂದರು.

ಲಿಂಗಭೇದ ರಹಿತ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ಇತರೆ ಎಲ್ಲಾ ಅಭಿವೃದ್ಧಿ ಗುರಿಗಳ ಸಾಧನೆ ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಯುವ ಮಹಿಳಾ ಮತದಾರರ ಆಕಾಂಕ್ಷೆಗಳನ್ನು ಪೂರೈಸಲು ಕಾಂಗ್ರೆಸ್ ಪಕ್ಷ ಪ್ರಿಯದರ್ಶಿನಿ ಯನ್ನು ಅಖಿಲ ಭಾರತ ಮಟ್ಟದಲ್ಲಿ ಪ್ರಾರಂಭಿಸಿದೆ ಎಂದು ಭವ್ಯಾ ನರಸಿಂಹ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಹಿರಿಯಡಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಂದ್ಯಾ ಶೆಟ್ಟಿ, ಕಾಂಗ್ರೆಸ್ ನಾಯಕ ಉದ್ಯಾವರ ನಾಗೇಶ್ ಕುಮಾರ್, ಪ್ರಿಯದರ್ಶಿನಿ ಸ್ಕ್ವಾಡ್‌ನ ಉಡುಪಿ ಉಸ್ತುವಾರಿ ಅದಿತಿ ಶೆಟ್ಟಿ, ಕಾಂಗ್ರೆಸ್ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಘಟಕದ ರೋಶನಿ ಒಲಿವೇರ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಗೀತಾ ವಾಗ್ಲೆ ಸ್ವಾಗತಿಸಿದರು. ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಿಯದರ್ಶಿನಿ ಸ್ಕ್ವಾಡ್ ದೇಶದ 16ರಿಂದ 35 ವಯಸ್ಸಿನೊಳಗಿನ ಯುವತಿಯರು ಹಾಗೂ ಮಹಿಳೆಯರಿಗೆ ರಾಜಕೀಯ ವೇದಿಕೆಯನ್ನು ಒದಗಿಸುವ ಪ್ರಯತ್ನವಾಗಿದೆ. ಹೆಣ್ಣು ಮಕ್ಕಳ ಧ್ವನಿಗೆ ದೇಶಾದ್ಯಂತ ಒಂದು ಸಂವಹನವನ್ನು ಸೃಷ್ಟಿಸಿ ಆ ಮೂಲಕ ಎಲ್ಲರನ್ನೂ ಒಗ್ಗೂಡಿಸುವುದಾಗಿದೆ.
- ಭವ್ಯ ನರಸಿಂಹಮೂರ್ತಿ, ಪ್ರಿಯದರ್ಶಿನಿ ಸ್ಕ್ವಾಡ್‌ನ ರಾಜ್ಯಾಧ್ಯಕ್ಷೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News