ಉಡುಪಿಯ ಚಿತ್ತರಂಜನ್ ಸರ್ಕಲ್‌ನಲ್ಲಿ ಸಾರ್ವಜನಿಕ ಸಭೆ, ಪ್ರತಿಭಟನೆಗೆ ನಿಷೇಧ

Update: 2018-11-15 15:58 GMT

ಉಡುಪಿ, ನ.15: ಉಡುಪಿಯ ಹೃದಯಭಾಗದಲ್ಲಿರುವ ಚಿತ್ತರಂಜನ್ ಸರ್ಕಲ್‌ನಲ್ಲಿ ಇನ್ನು ಮುಂದೆ ಯಾವುದೇ ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಧರಣಿ, ಪ್ರತಿಭಟನೆಗಳನ್ನು ನಡೆಸುವುದಕ್ಕೆ ಶಾಶ್ವತ ನಿಷೇಧ ಹೇರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯ ಟ್ರಾಫಿಕ್ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಚಿತ್ತರಂಜನ್ ಸರ್ಕಲ್‌ನಲ್ಲಿ ಸಾರ್ವಜನಿಕ ಪ್ರತಿಭಟನೆ/ಸಭೆ/ಸಮಾರಂಭಗಳನ್ನು ನಿಷೇಧಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು.

ಚಿತ್ತರಂಜನ್ ಸರ್ಕಲ್ ಉಡುಪಿ ನಗರದ ಕೇಂದ್ರದಲ್ಲಿದ್ದು, ಅಕ್ಕಪಕ್ಕದಲ್ಲೇ ಮೆಸ್ಕಾಂ ಕಚೇರಿ, ಉಡುಪಿ ಮುಖ್ಯ ಅಂಚೆ ಕಚೇರಿ, ಸರಕಾರಿ ಮಹಿಳಾ ಆಸ್ಪತ್ರೆ, ಗಾಂಧಿ ಆಸ್ಪತ್ರೆ, ಕೃಷ್ಣ ಮಠಗಳಿವೆ. ಅಲ್ಲದೇ ಚಿತ್ತರಂಜನ್ ಸರ್ಕಲ್ ಆಸುಪಾಸು ಹೆಚ್ಚಿನ ಸಂಖ್ಯೆಯಲ್ಲಿ ವಾಣಿಜ್ಯ ಸಂಕೀರ್ಣಗಳಿದ್ದು, ಇಲ್ಲಿಗೆ ಬರುವ ಗ್ರಾಹಕರು ಮತ್ತು ವಾಹನಗಳಿಂದ ಚಿತ್ತರಂಜನ್ ಸರ್ಕಲ್ ಸದಾ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ.

ಪ್ರಸ್ತುತ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಅನುಮತಿ ಪಡೆದು ಸಭೆ, ಪ್ರತಿಭಟನೆ, ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಆ ಸಮಯದಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಓಡಾಡಲು ತೊಂದರೆಯಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಸಾರ್ವಜನಿಕರಿಗೆ ಹಾಗೂ ತುರ್ತು ಸೇವೆಗಳಿಗೆ ಅಡ್ಡಿಯಾಗುವ ದೂರುಗಳಿವೆ. ಅಲ್ಲದೇ ಚಿತ್ತರಂಜನ್ ಸರ್ಕಲ್‌ನಲ್ಲಿ ಸದಾ ಜನದಟ್ಟಣೆ ಇರುವು ದರಿಂದ ಸಭೆ/ಕಾರ್ಯಕ್ರಮ/ ಪ್ರತಿಭಟನೆ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಮಸ್ಯೆ ತಲೆದೋರಿ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಈಗಾಗಲೇ ಮಣಿಪಾಲದಲ್ಲಿರುವ ಜಿಲ್ಲಾ ಕಚೇರಿ ಸಂಕೀರ್ಣ ಕಟ್ಟಡದ ಹೊರ ಆವರಣದಲ್ಲಿ ಸತ್ಯಾಗ್ರಹ ಕಟ್ಟೆಯನ್ನು ಉಪಯೋಗಿಸಲು ಸಾರ್ವಜನಿಕ ರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಅವಕಾಶವಿರುವುದರಿಂದ, ಉಡುಪಿಯ ಚಿತ್ತರಂಜನ್ ಸರ್ಕಲ್‌ನಲ್ಲಿ ಸಾರ್ವಜನಿಕ ಹಿತದೃಷ್ಟಿ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು, ಸಂಘಸಂಸ್ಥೆಗಳು ಯಾವುದೇ ಪ್ರತಿಭಟನೆ, ಸಾರ್ವಜನಿಕ ಸಭೆ, ಸಮಾರಂಗಳನ್ನು ನಡೆಸುವುದನ್ನು ಶಾಶ್ವತವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೆೀರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News