ಭೂಮಿಗೆ ಹತ್ತಿರದ ‘ದೊಡ್ಡ ಭೂಮಿ’ ಪತ್ತೆಹಚ್ಚಿದ ವಿಜ್ಞಾನಿಗಳು !

Update: 2018-11-15 16:26 GMT

ಪ್ಯಾರಿಸ್, ನ. 15: ನಮ್ಮ ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ನಕ್ಷತ್ರದ ಸುತ್ತ ಸುತ್ತುತ್ತಿರುವ ‘ದೊಡ್ಡ ಭೂಮಿ’ಯಂತೆ ಇರುವ ಗ್ರಹವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಇದು ಭೂಮಿಯ ಸಮೀಪದ ಭೂಮಿಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಭೂಮಿಯಿಂದ ಕೇವಲ 6 ಜ್ಯೋತಿರ್ವರ್ಷಗಳಷ್ಟು ದೂರವಿರುವ ಕೆಂಪು ಕುಬ್ಜ ನಕ್ಷತ್ರ ‘ಬರ್ನಾರ್ಡ್ಸ್ ಸ್ಟಾರ್’ ಬಗ್ಗೆ ಖಗೋಳ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ‘ಮಂಜುಗಟ್ಟಿದ, ಮಂದ ಬೆಳಕಿನ ಭೂಮಿಯನ್ನು ಹೋಲುವ ಗ್ರಹ’ವನ್ನು ಅವರು ಪತ್ತೆಹಚ್ಚಿದ್ದಾರೆ. ಈ ಗ್ರಹ ಭೂಮಿಗಿಂತ ಕನಿಷ್ಠ 3.2 ಪಟ್ಟು ಭಾರವಾಗಿದೆ.

ವಿಜ್ಞಾನಿಗಳು ಸದ್ಯಕ್ಕೆ ಈ ಗ್ರಹಕ್ಕೆ ‘ಬರ್ನಾರ್ಡ್ಸ್ ಸ್ಟಾರ್ ಬಿ’ ಎಂಬ ಹೆಸರು ಇಟ್ಟಿದ್ದಾರೆ.

ಇದು ಸೌರವ್ಯೂಹದ ಹೊರಗೆ ಭೂಮಿಗೆ ಎರಡನೇ ಹತ್ತಿರದ ಗ್ರಹವಾಗಿದೆ. ಇದು ತನ್ನ ಸೂರ್ಯನ ಸುತ್ತ ತಿರುಗಲು 233 ದಿನಗಳನ್ನು ತೆಗೆದುಕೊಳ್ಳುತ್ತದೆ.

ಈ ಗ್ರಹದ ಮೇಲ್ಮೈ ಉಷ್ಣತೆ ಮೈನಸ್ 170 ಡಿಗ್ರಿ ಸೆಲ್ಸಿಯಸ್ ಎಂಬುದಾಗಿ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದು ಜೀವಿಗಳಿಗೆ ಪೂರಕವಾದ ಉಷ್ಣತೆಗಿಂತ ತೀರಾ ಕಡಿಮೆಯಾಗಿದೆ.

‘‘ಈ ಗ್ರಹವು ವಾಸಯೋಗ್ಯ ವಲಯದಲ್ಲಿ ಇಲ್ಲ. ಅಲ್ಲಿ ದ್ರವ ರೂಪದ ನೀರಿಲ್ಲ’’ ಎಂದು ಕ್ಯಾಟಲೋನಿಯ ಬಾಹ್ಯಾಕಾಶ ಅಧ್ಯಯನಗಳ ಸಂಸ್ಥೆಯ ಇಗ್ನಾಸಿ ರಿಬಸ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News