ಮೂಡುಬಿದಿರೆಯಲ್ಲಿ ರಾಜ್ಯಮಟ್ಟದ ಆಳ್ವಾಸ್ ಕೃಷಿ ಸಿರಿ ಉದ್ಘಾಟನೆ

Update: 2018-11-15 16:32 GMT

ಮೂಡುಬಿದಿರೆ,ನ.15: ಸರಕಾರಿ ಸಂಸ್ಥೆಗಳೂ ಮಾಡಲಾಗದ ರೀತಿಯಲ್ಲಿ ಮಾದರಿಯಾಗಿ ಕೃಷಿ ಪ್ರದರ್ಶನ, ಕೃಷಿ ಸಿರಿಯನ್ನು ಆಯೋಜಿಸುವ ಮೂಲಕ ಈ ಭಾಗದಲ್ಲಿ ಮಾದರಿ ಕಾರ್ಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೂಲಕ ನಡೆದಿದೆ ಎಂದು ರಾಜ್ಯ ಕೃಷಿ ಸಚಿವ ಎನ್. ಎಚ್. ಶಿವಶಂಕರ ರೆಡ್ಡಿ ಹೇಳಿದರು. ಅವರು ಗುರುವಾರ ಸಂಜೆ ವಿದ್ಯಾಗಿರಿಯಲ್ಲಿ ಕೆ.ಎಸ್. ಪುಟ್ಟಣ್ಣಯ್ಯ ಕೃಷಿ ಆವರಣದಲ್ಲಿ ಆನಂದ ಬೋಳಾರ್ ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ 2018ಕ್ಕೆ ಪೂರಕವಾಗಿ ನಡೆಯಲಿರುವ ಐದನೇ ವರ್ಷದ ಕೃಷಿಸಿರಿಯನ್ನು ಪಂಚಮುಖಿ ದೀವಟಿಗೆ ಪ್ರಜ್ವಲನದೊಂದಿಗೆ ನೆರವೇರಿಸಿ ಮಾತನಾಡಿದರು. 

ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ದೃಷ್ಟಿಕೋನ ಹೊಂದಿರುವ ಸನ್ನಿವೇಶದಲ್ಲಿ ಆಳ್ವಾಸ್ ಸಂಸ್ಥೆ ವಿಶ್ವವಿದ್ಯಾನಿಲಯ ಮಾದರಿಯಲ್ಲಿ ಸಾಮಾಜಿಕ ಸೇವೆ,  ಸಂಸ್ಕೃತಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದವರು ಶ್ಲಾಘಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಾಸಕ ಉಮಾನಾಥ ಕೋಟ್ಯಾನ್ ಅವರು ಮನಸ್ಸು ಮತ್ತು ಪರಿಶ್ರಮವಿದ್ದಾಗ ಕೃಷಿ ರಂಗದಲ್ಲಿ ಯಶಸ್ಸು ಸಾಧ್ಯವೆಂದು ಡಾ. ಆಳ್ವಾ ಕೃಷಿಸಿರಿಯ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸ್ವಾಗತಿಸಿ ಸಚಿವರನ್ನು ಸಂಸ್ಥೆಯ ಪರವಾಗಿ ಗೌರವಿಸಿದರು. ಮಂಗಳೂರಿನ ತೋಟಗಾರಿಕಾ ವಿದ್ಯಾಲಯದ ಡೀನ್ ಡಾ.ಹೆಚ್. ಶಿವಾನಂದ ಮೂರ್ತಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ  ಸಂಪತ್ ಡಿ.ಸಾಮ್ರಾಜ್ಯ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಸುಭಾಶ್ಚಂದ್ರ ಚೌಟ,  ರೈತ ಸಂಘದ ಹಂಡೇಲುಗುತ್ತು ಧನಕೀರ್ತಿ ಬಲಿಪ, ಉದ್ಯಮಿ ಕೆ.ಶ್ರೀಪತಿ ಭಟ್ ಉಪಸ್ಥಿತರಿದ್ದರು. ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ವೈಜ್ಞಾನಿಕ ಸಲಹಾ ಸಮಿತಿ ಸದಸ್ಯ ರಾಜವರ್ಮ ಬೈಲಂಗಡಿ ವಂದಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆಯ ಬಗ್ಗೆ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವರು ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರ ಗಮನ ಸೆಳೆದಿದ್ದೇನೆ. ಶೀಘ್ರದಲ್ಲಿಯೇ ಸಕ್ಕರೆ ಕಂಪೆನಿಗಳ ಮಾಲೀಕರು ಹಾಗೂ ಸಂಬಂಧಪಟ್ಟವರ ಸಭೆ ಕರೆದು ಚರ್ಚಿಸಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News