'ದಲಿತ ಫಲಾನುಭವಿಗಳಿಗೆ ತಾಲೂಕಿನ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ನೀಡುತ್ತಿಲ್ಲ'

Update: 2018-11-15 16:41 GMT

ಬಂಟ್ವಾಳ, ನ. 15: ವಿವಿಧ ಯೋಜನೆಗಳಡಿ ಸಹಾಯಧನ ಪಡೆಯುವ ದಲಿತ ಫಲಾನುಭವಿಗಳಿಗೆ ತಾಲೂಕಿನ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ನೀಡುತ್ತಿಲ್ಲ ಎಂದು ದಲಿತ ಮುಖಂಡರು ಬ್ಯಾಂಕ್‍ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಹಶೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ದಲಿತ ದೌರ್ಜನ್ಯ ಕುಂದು ಕೊರತೆ ನಿವಾರಣ ಸಭೆಯಲ್ಲಿ ಅಳಲು ತೋಡಿಕೊಂಡ ಅವರು, ಬ್ಯಾಂಕ್ ಅಧಿಕಾರಿಗಳ ಈ ನಿರ್ಲಕ್ಷ ಧೋರಣೆಯಿಂದಾಗಿ ದಲಿತ ಫಲಾನುಭವಿಗಳಿಗೆ ತೊಂದರೆ ಉಂಟಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭ ಪಶುಸಂಗೋಪನಾ ಇಲಾಖಾ ಅಧಿಕಾರಿ ಮಾತನಾಡಿ, ತಮ್ಮ ಇಲಾಖೆಯ ಇಬ್ಬರು ಫಲಾನುಭವಿಗಳ ಅರ್ಜಿಯನ್ನು ಬಿ.ಸಿ.ರೋಡಿನ ಎರಡು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಕೊರಿಯರ್ ಮೂಲಕ ಕಳುಹಿಸಿ ಕೊಡಲಾಗಿತ್ತಾದರೂ ಸ್ಪಂದಿಸದ ಬ್ಯಾಂಕ್ ಅಧಿಕಾರಿಗಳು ಅರ್ಜಿಯ ವಾಯಿದೆ ಮುಗಿದ ಬಳಿಕ ಮರಳಿ ಅರ್ಜಿಯನ್ನು ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಸಭಾಧ್ಯಕ್ಷರಿಗೆ ತಿಳಿಸಿದರು. ಬ್ಯಾಂಕ್‍ಗೆ ಒಂದುವಾರಗಳ ಕಾಲ ಗಡುವು ನೀಡಿ ತಹಶೀಲ್ದಾರ್ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ದಲಿತ ಮುಖಂಡರೊಬ್ಬರು ಆಗ್ರಹಿಸಿದರು. ಈ ಬಗ್ಗೆ ಸಂಬಂಧಪಟ್ಟ ಎಲ್ಲ ಬ್ಯಾಂಕಿನ ಶಾಖಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮುಂದಿನ ಕ್ರಮ ಜರಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದರು. 

ಮನೆ ಮತ್ತಿತರ ಕಟ್ಟಡ ನಿರ್ಮಾಣಕ್ಕೆ ಮರಳು ಅಭಾವ ಉಂಟಾಗಿರುವ ಹಿನ್ನಲೆಯಲ್ಲಿ ಅನೇಕ ದಲಿತ ಕುಟುಂಬಗಳ ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ತುಂಬಾ ತೊಂದರೆ ಪಡುತ್ತಿದ್ದಾರೆ. ಆದಷ್ಟು ಬೇಗ ಮರಳು ಸಮಸ್ಯೆಯನ್ನು ಬಗೆಹರಿಸಿ ದಲಿತರಿಗೆ  ಮನೆ ಕಟ್ಟಲು ಮರಳು ಸಮಸ್ಯೆಯನ್ನು ಬಗೆಹರಿಸ ಬೇಕೆಂದು ದಲಿತ ಮುಖಂಡ ರಾಜಾ ಪಲ್ಲಮಜಲು ಆಗ್ರಹಿಸಿದರು.

ತಮ್ಮ ಸ್ವಂತ ಮನೆ ನಿರ್ಮಾಣಕ್ಕೆ ಮರಳು ಕೊಂಡೊಯ್ದರೂ ಅದಕ್ಕೆ ದಂಡ ವಿಧಿಸಲಾಗುತ್ತಿದೆ. ಬಡವರು ಮನೆ ಮತ್ತಿತರ ಕಟ್ಟಡ ಕಟ್ಟಲು ಮರಳು ಕೊಂಡೊಯ್ಯುತ್ತಾರೆಯೇ ವಿನಃ ಅಕ್ರಮವಾಗಿ ಸಾಗಟ ಮಾಡುವುದಲ್ಲ ಎಂದು ವಿಶ್ವನಾಥ ಚೆಂಡ್ತಿಮಾರ್ ತಿಳಿಸಿದರು. 

ಮರಳು ಸಮಸ್ಯೆಯ ಬಗ್ಗೆ ಈಗಾಗಲೇ ಅನೇಕ ದೂರುಗಳು ಕೇಳಿ ಬಂದಿದೆ. ಇದು ಜಿಲ್ಲಾಮಟ್ಟದಲ್ಲಿ ಇತ್ಯರ್ಥವಾಗಬೇಕಾದ ವಿಚಾರವಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಸ್ಪಷ್ಟ ಪಡಿಸಿದರು.

ಅನಾಥಶ್ರಮವೊಂದರಲ್ಲಿ ಮಹಿಳೆಯರಿಗೆ ತೊಂದರೆ ನೀಡಲಾಗುತ್ತಿದೆ ಎಂದು ದಲಿತ ಮಹಿಳೆಯೊಬ್ಬರು ಸಭೆಯ ಗಮನಕ್ಕೆ ತಂದರು. ಆದರೆ, ಇದು ಎಲ್ಲಿನ ಅನಾಥಶ್ರಮ ಮತ್ತು ಯಾರು ತೊಂದರೆ ನೀಡುತ್ತಿರುವುದು ಎನ್ನುವ ಬಗ್ಗೆ ಪೂರ್ಣ ಮಾಹಿತಿ ನೀಡಲು ನಿರಾಕರಿಸಿದ ಮಹಿಳೆ ಈ ಬಗ್ಗೆ ಪೊಲೀಸರಿಗೂ ತಿಳಿದಿದೆ ಎಂದರು.

ಡಿಸಿ ಮನ್ನ ಜಮೀನು ಹಂಚಿಕೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಖಾಸಗಿ ಸಂಘ ಸಂಸ್ಥೆಗಳು ಸರಕಾರಿ ಜಮೀನಿನಲ್ಲಿ ದೊಡ್ಡ ಕಟ್ಟಡಗಳನ್ನು ನಿರ್ಮಿಸುತ್ತಿದ್ದರೂ ಕೂಡ ಅಧಿಕಾರಿಗಳು ಮಾತನಾಡುವುದಿಲ್ಲ, ಆದರೆ ದಲಿತರಿಗೆ ಹಂಚಿಕೆ ಮಾಡಲು ಜಮೀನು ಲಭ್ಯವಿಲ್ಲ ಎನ್ನುತ್ತೀರಿ ಎಂದು ರಾಜಾ ಪಲ್ಲಮಜಲು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಾಯತ್ರಿ ವೇದಿಕೆಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News