​ಮಂಗಳೂರಿನ ಹರ್ಷ ಭಟ್‌ಗೆ ಫ್ರೆಂಚ್ ವಿಜ್ಞಾನ ಪ್ರಶಸ್ತಿ

Update: 2018-11-15 18:27 GMT

ಮಂಗಳೂರು, ನ.15: ಎಕೋಲೆ ನಾರ್ಮಲ್ ಸುಪೀರಿಯರ್ ಲ್ಯಾಬೊರೇಟರಿ ಆಫ್ ಜಿಯಾಲಜಿಯಲ್ಲಿ ಸಿಎನ್‌ಆರ್‌ಎಸ್(ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರೀಸರ್ಚ್)ಸಂಶೋಧಕರಾಗಿರುವ ಹರ್ಷ ಎಸ್.ಭಟ್ ಅವರು ಫ್ರೆಂಚ್ ಅಕಾಡಮಿ ಆಫ್ ಸೈನ್ಸ್‌ಸ್‌ನ 2018ನೇ ಸಾಲಿನ ಪ್ರತಿಷ್ಠಿತ ‘ಮೈಕೆಲ್ ಗಾಲಾಡ್ ಶುಂಬರ್ಗರ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 20,000 ಯುರೋ ನಗದು ಮತ್ತು ಪದಕವನ್ನೊಳಗೊಂಡಿದೆ.

ಕರ್ನಾಟಕ ಕೋಮು ಸೌಹಾರ್ದ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಭಟ್ ಬಾಕ್ರಬೈಲ್ ಅವರ ಪುತ್ರರಾಗಿರುವ ಹರ್ಷ ಸುರತ್ಕಲ್‌ನ ಎನ್‌ಐಟಿಕೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ನವಂಬರ್ 20ರಂದು ಅವರಿಗೆ ಪ್ರಶಸ್ತಿಯನ್ನು ಪ್ರದಾನಿಸಲಾಗುವುದು.

ಭೂಗರ್ಭ ಶಾಸ್ತ್ರ ಅಥವಾ ಭೂಭೌತ ಶಾಸ್ತ್ರ ಕ್ಷೇತ್ರಗಳಲ್ಲಿ 35 ವರ್ಷ ಪ್ರಾಯಕ್ಕೆ ಮೊದಲು ಮಹತ್ವದ ಆವಿಷ್ಕಾರಗಳಿಗಾಗಿ 45 ವರ್ಷಗಳಿಗೂ ಕಡಿಮೆ ವಯೋಮಾನದ ಸಂಶೋಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭೂಕಂಪಗಳಿಗೆ ಸಂಬಂಧಿಸಿದಂತೆ ತನ್ನ ಮೂಲ ಸಂಶೋಧನೆಗಳಿಗಾಗಿ ಹರ್ಷ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಹಾರ್ವರ್ಡ್ ವಿವಿಯಲ್ಲಿ ಪಿಎಚ್‌ಡಿ ಮತ್ತು ಕಾಲ್ಟೆಕ್ ಮತ್ತು ದ.ಕ್ಯಾಲಿಫೋರ್ನಿಯಾ ವಿವಿಯಲ್ಲಿ ಪೋಸ್ಟ್ ಡಾಕ್ಟರಲ್ ಅಧ್ಯಯನ ಪೂರೈಸಿರುವ ಹರ್ಷ 2012ರಲ್ಲಿ ಹಿರಿಯ ಸಂಶೋಧನಾ ಸಹಾಯಕರಾಗಿ ಸಿಎನ್‌ಆರ್‌ಎಸ್ ಸೇರಿದ್ದರು.

ತನ್ನ ಪುತ್ರನ ಬಗ್ಗೆ ಮತ್ತು ವಿಜ್ಞಾನ ಹಾಗೂ ಮಾನವ ಜನಾಂಗಕ್ಕೆ ಆತನ ಕೊಡುಗೆಯ ಬಗ್ಗೆ ತನಗೆ ಹೆಮ್ಮೆಯಿದೆ ಎಂದು ಸುರೇಶ ಭಟ್ ಬಾಕ್ರಬೈಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News