ಯುವಜನರಿಗೆ ಉದ್ಯಮ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಲು ಯೂತ್ ಇಂಡಿಯಾ ಯೋಜನೆ ಜಾರಿ: ಎಫ್‌ಕೆಸಿಸಿ ಅಧ್ಯಕ್ಷ ಸುಧಾಕರ ಶೆಟ್ಟಿ

Update: 2018-11-16 09:29 GMT

ಮಂಗಳೂರು, ನ.16: ಯುವಜನರಿಗೆ ಉದ್ಯಮ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಲು ಮತ್ತು ಉತ್ತೇಜಿಸಲು ಕರ್ನಾಟಕ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ  ಸಂಘದ ವತಿಯಿಂದ ಯೂತ್ ಇಂಡಿಯಾ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳು ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಕಾನ್ಸೆಫ್ಟ್‌ಗಳನ್ನು ಸಿದ್ಧಪಡಿಸಿದರೆ ಅದರಲ್ಲಿ 9 ಪ್ರಾಜೆಕ್ಟ್‌ಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ ಎಂದು ಎಫ್‌ಕೆಸಿಸಿ(ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ)ಯ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಹೇಳಿದರು.

ಅವರು ಇಂದು ನಗರದ ಬಂದರಿನಲ್ಲಿರುವ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪದಾಧಿಕಾರಿಗಳ ಜತೆಗೆ ಸಂವಾದ ನಡೆಸಿದ ಬಳಿಕ ಮಾತನಾಡಿ, ವಿದ್ಯಾರ್ಥಿ ಸಮೂಹ ಕೈಗಾರಿಕೆ, ಉದ್ದಿಮೆ ಕ್ಷೇತ್ರದಲ್ಲಿ ಆಸಕ್ತಿ ವಹಿಸುವಂತೆ ಮಾಡಲು ಈ ಆರ್ಥಿಕ ವರ್ಷದಿಂದ ಯೂತ್ ಇಂಡಿಯಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಜಿಲ್ಲಾ ಮಟ್ಟದಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ನಮ್ಮ ಗಮನಕ್ಕೆ ತಂದರೆ ಅಂತಹ ಪ್ರಾಜೆಕ್ಟ್‌ಗೆ ಸಹಕಾರ ನೀಡಲಾಗುತ್ತದೆ ಎಂದರು.

ಇತ್ತೀಚಿನ ಮಾಹಿತಿಯ ಪ್ರಕಾರ 1 ಕೋಟಿ ಜನಸಂಖ್ಯೆಯ ಲೆಕ್ಕಚಾರದಲ್ಲಿ 90 ಲಕ್ಷ ಮಂದಿ ಯುವಜನರು ಇದ್ದಾರೆ. ಅವರಿಗೆ ಸ್ವಉದ್ಯೋಗ ಸೃಷ್ಟಿ ಮಾಡಬೇಕಾದ ಅಗತ್ಯ ಇದೆ. ಈ ಯೋಜನೆಯಲ್ಲಿ ಭಾಗಿಗಳಾಗುವವರು ಮುಖ್ಯವಾಗಿ 24ರಿಂದ 35 ವರ್ಷದೊಳಗಿನವರಾಗಿರಬೇಕು. ಈ ಮೂಲಕ 5 ಲಕ್ಷ ಮಂದಿಗಳಾದರೂ ನೆರವಾದರೆ ಉಳಿದ 85 ಲಕ್ಷ ಮಂದಿ ಉದ್ಯೋಗ ಸೃಷ್ಟಿಯ ಮೂಲಕ ಪರೋಕ್ಷ ರೀತಿಯಲ್ಲಿ ಲಾಭ ಪಡೆದುಕೊಳ್ಳುತ್ತಾರೆ ಎಂದರು.

ರಾಜ್ಯದ 30 ಜಿಲ್ಲೆಗಳಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಮಾತೃ ಸಂಸ್ಥೆಗೆ ಎಫ್‌ಕೆಸಿಸಿಐ ಕಾರ್ಯ ನಿರ್ವಹಣೆ ಮಾಡಿಕೊಂಡು ಬರುತ್ತಿದೆ. ಜಿಲ್ಲೆಗಳಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳನ್ನು ಅರಿತುಕೊಂಡು ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನಕ್ಕೆ ತಂದು ಪರಿಹಾರ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕಾರ‍್ಯಪ್ರವೃತ್ತವಾಗಿದೆ. 200ಕ್ಕೂ ಅಧಿಕ ಹೋಟೆಲ್ ಸೇರಿದಂತೆ ಇತರ ಫೆಡರೇಶನ್‌ಗಳನ್ನು ಕೂಡ ಒಟ್ಟಿಗೆ ಸೇರಿಸಿಕೊಂಡು ಕೆಲಸ ಮಾಡುತ್ತಿದೆ ಎಂದರು.

ರಾಜ್ಯದ ಅಭಿವೃದ್ಧಿ ಎಂದರೆ ಅದು ಬರೀ ಬೆಂಗಳೂರು ಅಭಿವೃದ್ಧಿಯಲ್ಲ, ಬದಲಾಗಿ ರಾಜ್ಯದ 30 ಜಿಲ್ಲೆಗಳಲ್ಲಿಯೂ ಅಭಿವೃದ್ಧಿಯಾಗಬೇಕು ಎಂದು ನಂಬಿಕೆ ಇಟ್ಟುಕೊಂಡು ಸಂಸ್ಥೆ ಕಾರ‍್ಯನಿರ್ವಹಿಸುತ್ತಿದೆ. ಮುಖ್ಯವಾಗಿ ಉದ್ಯೋಗ ನೀಡುವ ಕ್ಷೇತ್ರದಲ್ಲಿ ಖಾಸಗಿ ಉದ್ಯಮ ಕ್ಷೇತ್ರಗಳು ಅಗ್ರಸ್ಥಾನದಲ್ಲಿದೆ. ಇದಕ್ಕೆ ತಕ್ಕಂತೆ ನಮ್ಮ ದೇಶದ ಉತ್ಪನ್ನಗಳು ಇತರ ದೇಶಗಳಲ್ಲೂ ಬೇಡಿಕೆ ಸೃಷ್ಟಿಯಾಗಬೇಕು. ಅಮೆರಿಕ, ಚೀನಾದಂತಹ ದೇಶಗಳ ಜತೆಗೆ ಪೈಪೋಟಿ ನಡೆಸುವಂತಹ ಪ್ರಾಡಕ್ಟ್‌ಗಳು ನಮ್ಮ ದೇಶದಲ್ಲೂ ಉತ್ಪಾದನೆಯಾಗುವ ನಿಟ್ಟಿನಲ್ಲಿ ಇಲ್ಲಿನ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು ಎಂದು ಫೆಡರೇಶನ್ ಬಯಸುತ್ತಿದೆ ಅದಕ್ಕೆ ತಕ್ಕಂತೆ  ಕೆಲಸ ಕೂಡ ಮಾಡುತ್ತಿದೆ ಎಂದರು.

*ಕರಾವಳಿಯ ಸಮಸ್ಯೆಗಳಿಗೆ ಪರಿಹಾರ:
ಇಡೀ ರಾಜ್ಯ ಜಿಎಸ್‌ಟಿ ವಿಚಾರದಲ್ಲಿ ಅದ್ಬುತವಾದ ಸಾಧನೆ ಮಾಡಿದೆ. ಎಫ್‌ಕೆಸಿಸಿಐ 340ಕ್ಕಿಂತ ಹೆಚ್ಚು ಜಿಎಸ್‌ಟಿ ಜಾಗೃತಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಕೆಲಸ ಮಾಡಿದರ ಪರಿಣಾಮ ಉತ್ತಮ ಫಲಿತಾಂಶ ಸಾಧ್ಯವಾಗಿದೆ. ಕರಾವಳಿ ಭಾಗದ ಸಮಸ್ಯೆಗಳಲ್ಲಿ ಪ್ರಮುಖವಾಗಿ ಮಂಗಳೂರು ಎನ್‌ಎಂಪಿಟಿ ಬಂದರು ಹಾಗೂ ಚೆನ್ನೈಗೆ ಸಂಪರ್ಕ ರಸ್ತೆಗಳಲ್ಲಿ ಅಭಿವೃದ್ಧಿಯಾಗಬೇಕು. ಈ ರೀತಿ ನಡೆದರೆ ಎನ್‌ಎಂಪಿಟಿ ಬಂದರಿನ ಆದಾಯ ಹೆಚ್ಚುತ್ತದೆ. ಇದಕ್ಕೆ ಶಿರಾಡಿ ಘಾಟ್ ರಸ್ತೆಗಳಲ್ಲೂ ಸಾಕಷ್ಟು ಬದಲಾವಣೆಗಳು ನಡೆಯಬೇಕು ಎಂದು ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ನೀಡಲಾಗಿದೆ ಎಂದರು.

*ವ್ಯಾಪಾರ ಪರವಾನಿಗೆ ರದ್ದು ಅಗತ್ಯ:

1954ರಲ್ಲಿ ಹೋಟೆಲ್ ಉದ್ಯಮದಲ್ಲಿ ಕಾಣಿಸಿಕೊಂಡ ಟ್ರೇಡ್ ಲೈಸನ್ಸ್(ವ್ಯಾಪಾರ ಪರವಾನಿಗೆ) ಅಗತ್ಯವೇ ಇಲ್ಲ. ಜಿಎಸ್‌ಟಿ ಬಂದ ಬಳಿಕ ಅದರ ಅಗತ್ಯವಿಲ್ಲ. ಬೆಂಗಳೂರು ವ್ಯಾಪ್ತಿಯಲ್ಲಿ ಈ ಕುರಿತು ನೋಟಿಫಿಕೇಶನ್ ಆಗಿದೆ. ಆದರೆ ಸರ್ಕಾರದ ಆದೇಶವಾಗಿಲ್ಲ. ಟ್ರೇಡ್ ಲೈಸನ್ಸ್ ನೆಪದಲ್ಲಿ ಪ್ರತಿವರ್ಷ ರಿನೀವಲ್ ಮಾಡಿಸುತ್ತಾ ಇರಬೇಕು. ಆಸ್ತಿ ತೆರಿಗೆಯಲ್ಲೂ ಏಕರೂಪತೆ ಇಲ್ಲ. ಪಂಚಾಯತ್ ನಿಂದ ಪಂಚಾಯತ್ ಗೆ ಭಿನ್ನವಾಗಿದೆ. ಇದನ್ನು ತೆಗೆದು ಹಾಕುವುದೇ ಒಳ್ಳೆಯದು. ಇಲ್ಲದೇ ಹೋದರೆ ಸರಕಾರ ಏಕರೂಪತೆಯ ತೆರಿಗೆಯನ್ನು  ಜಾರಿಗೆ ತರಬೇಕು ಎಂದರು.

*ಅಧಿಕಾರಿಗಳ, ಜನರ ಮನೋಭಾವ ಬದಲಾಗಬೇಕು:
ಹೊಸ ಉದ್ಯಮಗಳನ್ನು ಆರಂಭ ಮಾಡುವ ಉದ್ದಿಮೆದಾರರ ವಿಚಾರದಲ್ಲಿ ಸರಕಾರಿ ಅಧಿಕಾರಿಗಳ ಜತೆಗೆ ಬ್ಯಾಕಿಂಗ್ ಅಧಿಕಾರಿಗಳ ಮನೋಭಾವ ಬದಲಾವಣೆಯಾಗಬೇಕಾದ ಅಗತ್ಯವಿದೆ. ಯಾರೊಬ್ಬರು ಉದ್ಯಮ ಆರಂಭ ಮಾಡಬೇಕು ಎಂದುಕೊಂಡು ಬ್ಯಾಕಿಂಗ್ ಕ್ಷೇತ್ರಕ್ಕೆ ಬಂದರೆ ಅಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮುಖ್ಯವಾಗಿ ಇಂತಹವರಿಗೆ ಎಫ್‌ಕೆಸಿಸಿಐ ಸದಾ ಕಾಲ ನೆರವು ನೀಡುತ್ತದೆ. ಇದಕ್ಕಾಗಿಯೇ ಹೆಲ್ಪ್ ಡೆಸ್ಕ್‌ವೊಂದನ್ನು ರಚನೆ ಮಾಡಲಾಗಿದೆ. ಯಾವ ಉದ್ಯಮಿ ತಮ್ಮ ಪ್ರಾಜೆಕ್ಟ್ ಕುರಿತು ಸಮಸ್ಯೆಯನ್ನು ಎದುರಿಸುತ್ತಾನೋ ಅವನು ನೇರವಾಗಿ ನಮ್ಮನ್ನು ಸಂಪರ್ಕ ಮಾಡಬಹುದು. ಮುಖ್ಯವಾಗಿ ಎಫ್‌ಕೆಸಿಸಿಐ ಅಡಿಯಲ್ಲಿ ಎನ್‌ಆರ್‌ಐ ಫೋರಂವೊಂದನ್ನು ರಚಿಸಿಕೊಂಡು 6 ತಿಂಗಳಲ್ಲಿ 18 ವಿದೇಶಿ ದೇಶಗಳಿಗೆ ಭೇಟಿ ಕೊಡಲಾಗಿದ್ದು, ಎಲ್ಲರೂ ದೇಶದಲ್ಲಿ ಬಂಡವಾಳ ಹಾಕಲು ಮುಂದೆ ಬರುತ್ತಿದ್ದಾರೆ ಆದರೆ ಇಲ್ಲಿನ ವ್ಯಾಪಾರ ಕುರಿತು ಇರುವ ನೀತಿ ನಿಯಮಗಳಲ್ಲಿ ಸಡಿಲಿಕೆ ಅಗತ್ಯವಿದೆ ಎಂದರು.

ಸಮಾರಂಭದಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ವತಿಯಿಂದ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿರುವ ಸಮಸ್ಯೆಗಳ ಕುರಿತಾದ ಮನವಿಯನ್ನು ಎಫ್‌ಕೆಸಿಸಿಐ ಅಧ್ಯಕ್ಷರಿಗೆ ನೀಡಲಾಯಿತು.

ಈ ಸಂದರ್ಭ ಕೆನರಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ಉಪಾಧ್ಯಕ್ಷ ಐಸಾಕ್ ವಾಸ್, ಖಜಾಂಚಿ ಗಣೇಶ್ ಕಾಮತ್,  ಪ್ರಧಾನ ಕಾರ‍್ಯದರ್ಶಿ ಪ್ರಶಾಂತ್ ಸಿ.ಜಿ., ಕಾರ‍್ಯದರ್ಶಿ ಶಶಿಧರ್ ಪೈ ಮಾರೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News