ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ವಿರುದ್ಧ: ಬಂಟ್ವಾಳದಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2018-11-16 09:34 GMT

ಬಂಟ್ವಾಳ, ನ. 16: ಲಾಭದಲ್ಲಿರುವ ವಿಜಯಾ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಬ್ಯಾಂಕ್‌ಗಳ ಜೊತೆ ವಿಲೀನ ಮಾಡುವುದರ ಹಿಂದೆ ಕಾರ್ಪೊರೇಟ್ ಜಗತ್ತಿಗೆ ಸಹಾಯ ಮಾಡುವ ಉದ್ದೇಶ ಅಡಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

 ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬಿ.ಸಿ.ರೋಡ್ ವಿಜಯಾ ಬ್ಯಾಂಕ್ ಮುಂಭಾಗ ಬ್ಯಾಂಕು ವಿಲೀನ ಪ್ರಕ್ರಿಯೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಅವರ ಸೂಚನೆ ಮೇರೆಗೆ ಈ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಬಡವರಿಗೆ ಸಹಾಯವಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಬ್ಯಾಂಕ್ ಹೆಸರನ್ನೇ ಅಳಿಸಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ನಳಿನ್ ಕುಮಾರ್ ಕಟೀಲ್ ಸಂಸದರಾಗಿದ್ದು, ಜವಾಬ್ದಾರಿ ಮರೆತು ಮಾತನಾಡುತ್ತಿದ್ದಾರೆ. ಮನಮೋಹನ ಸಿಂಗ್ ವಿಜಯಾ ಬ್ಯಾಂಕ್ ವಿಲೀನಕ್ಕೆ ಸಹಿ ಹಾಕಿದ್ದಾರೆ ಎಂಬ ಅವರ ಮಾತು ಅಜ್ಞಾನ ಪ್ರದರ್ಶಿಸುತ್ತದೆ ಎಂದು ಹೇಳಿದ ರೈ, ಇಂದು ಶಿರಾಡಿ ಕಾಮಗಾರಿ ನಿಲ್ಲುತ್ತಿದ್ದು, ಅದಕ್ಕೆ ಸಂಬಂಧಿಸಿದ ಇಲಾಖೆ ಜೊತೆ ನಳಿನ್ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.

ನಾನು ಸೋಲಲಿ, ಗೆಲ್ಲಲಿ ನನ್ನ ಕಾಲದಲ್ಲಿ ಆರಂಭಗೊಂಡ ಅಭಿವೃದ್ಧಿ ಕಾರ್ಯ ನಿಲ್ಲಲು ಬಿಡುವುದಿಲ್ಲ. ಈಗಿನ ಶಾಸಕರ ಎಲ್ಲ ಕಾರ್ಯಗಳಿಗೂ ನಾನು ಅಡ್ಡಗಾಲು ಹಾಕುತ್ತಿದ್ದೇನೆಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ಖಾಸಗಿ ಬಸ್ ನಿಲ್ದಾಣ, ಪಡೀಲ್ ಜಿಲ್ಲಾ ಸಂಕೀರ್ಣ, ಕುಡಿಯುವ ನೀರು ಯೋಜನೆ ಅನುಷ್ಠಾನ, ಬೆಂಜನಪದವು ಕ್ರೀಡಾಂಗಣ ಸಹಿತ ತಾನು ಆರಂಭಿಸಿದ ಎಲ್ಲ ಕಾರ್ಯಗಳೂ ಸಂಪನ್ನಗೊಳ್ಳಬಾರದು ಎಂದು ಅಡ್ಡಗಾಲು ಹಾಕುವುದು ಯಾರು? ಎಂದು ಪ್ರಶ್ನಿಸಿದ ರೈ, ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ಬೈದು, ಕಾಂಪೌಂಡ್ ಒಡೆಯಲು ಹೋಗುವ ಕೆಲಸವನ್ನು ನಾವು ಮಾಡುತ್ತಿಲ್ಲ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮುಹಮ್ಮದ್, ತುಂಬೆ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾಧವ ಮಾವೆ, ಬಿ.ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪಕ್ಷ ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಸಂಜೀವ ಪೂಜಾರಿ, ಪ್ರಶಾಂತ್ ಕುಲಾಲ್, ಲುಕ್ಮಾನ್, ಮಾಧವ ಮಾವೆ, ಮುಹಮ್ಮದ್ ನಂದರಬೆಟ್ಟು, ಗಂಗಾಧರ ಪೂಜಾರಿ, ಪರಮೇಶ್ವರ ಮೂಲ್ಯ, ರಾಮಕೃಷ್ಣ ಆಳ್ವ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಧನಲಕ್ಷ್ಮೀ ಬಂಗೇರ, ಮುಹಮ್ಮದ್ ನಂದಾವರ, ಸದಾಶಿವ ಬಂಗೇರ, ಸಿದ್ದೀಕ್ ಗುಡ್ಡೆಯಂಗಡಿ, ಹಸೈನಾರ್, ಸಂಪತ್ ಕುಮಾರ್ ಶೆಟ್ಟಿ, ಶರೀಫ್ ಶಾಂತಿಯಂಗಡಿ, ವಾಸು ಪೂಜಾರಿ, ವಿಜಯ್ ಬ್ಯಾಂಕ್‌ನ ಶೇಖರ ಮೂಲ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News