ಇನ್ನೊಬ್ಬರು ನಡೆದ ಹಾದಿಯಲ್ಲಿ ನಡೆಯುವ ಬದಲು ನಿಮ್ಮ ಹಾದಿಯಲ್ಲಿ ನಡೆಯಿರಿ: ರಮೇಶ್ ಅರವಿಂದ್

Update: 2018-11-17 05:45 GMT

ಮೂಡುಬಿದಿರೆ, ನ. 16: ಏನೇ ಮಾತನಾಡಿದರೂ ನಾವು ನಂಬಿಕೆಯಿಟ್ಟು, ಹೃದಯದಿಂದ ಮಾತನಾಡಬೇಕು. ನಮ್ಮ ಕೊರತೆ ನಮಗೆ ಕಾಣದ ಈ ಕಾಲ ಘಟ್ಟದಲ್ಲಿ ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಬೇಕು, ಬೇರೆಯವರ ಹಾದಿಯಲ್ಲಿ ನಡೆವ ಬದಲು ನಿಮ್ಮ ಹಾದಿಯಲ್ಲಿ ನೀವು ನಡೆದರೆ ಉತ್ತಮ ಎಂದು ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್ ಹೇಳಿದರು.

ಅವರು ಆಳ್ವಾಸ್ ನುಡಿಸಿರಿಯ ಮೊದಲ ದಿನ ನಡೆದ ನನ್ನ ಕಥೆ- ನಿಮ್ಮ ಜೊತೆ ಕಾರ್ಯಕ್ರಮದಲ್ಲಿ ತಮ್ಮ ಜೀವನಾನುಭವವನ್ನು ಹಂಚಿಕೊಂಡರು.
ಈ ಜಗತ್ತಿನಲ್ಲಿ ಒಳ್ಳೆಯ ತಂದೆ-ತಾಯಿ ಸಿಗೋದಕ್ಕಿಂತ ದೊಡ್ಡ ಆಸ್ತಿಯಿಲ್ಲ. ಮನಶಾಂತಿ, ನೆಮ್ಮದಿಗಿಂತ ಸುಖಕರವಾದ ಯಶಸ್ಸಿಲ್ಲ. ಯೋಚಿಸುವ ರೀತಿ, ಮಾತು, ಕೆಲಸ, ಒಂದಾಗಿದ್ದರೆ ಮಾತ್ರ ಮನಶಾಂತಿಯೆಂಬ ಯಶಸ್ಸು ಲಭಿಸುತ್ತದೆ ಎಂದರು.

ಆತ್ಮತೃಪ್ತಿಯ ಕೆಲಸ: ನಾವು ಅನುಭವಿಸುತ್ತಿರುವ ನರಕದ ಸ್ಥಳದಲ್ಲಿ ಆತ್ಮತೃಪ್ತಿ ಸಿಗುವ ಕೆಲಸ ದೊರಕಿದರೆ ಆ ನರಕವೂ ಸ್ವರ್ಗವಾಗುತ್ತದೆ. ಇವೆಲ್ಲದಕ್ಕೂ ಕಾರಣ ನಮ್ಮ ಯೋಚನೆ. ನಾವು ಮಾಡುವ ಕೆಲಸದಲ್ಲಿ ಶ್ರೇಷ್ಟತೆ ಇರಬೇಕು, ನಿರಂತರ ಅಧ್ಯಯನ, ಪ್ರಾಯೋಗಿಕ ಅನುಭವ ನಮ್ಮನ್ನು ಅನುದಿನ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದರು.

ಮಕ್ಕಳನ್ನು ಬೆಳೆಸುವ ರೀತಿ: ಮಕ್ಕಳಿಗೆ ಪ್ರಾರಂಭದಲ್ಲಿ ಮೌಲ್ಯ ಮತ್ತು ಜವಾಬ್ದಾರಿಯನ್ನು ಸರಿಯಾಗಿ ಕಲಿಸಬೇಕು. ಆ ಬಳಿಕ ಅವರನ್ನು ಸ್ವತಂತ್ರ ವಾಗಿರುವುದಕ್ಕೆ ಬಿಡಬೇಕು. ಆಗ ಮಾತ್ರ ಆ ಮಗು ತನ್ನ ನಿಜವಾದ ಅಸ್ತಿತ್ವವನ್ನು ತೋರ್ಪಡಿಸುವದಕ್ಕೆ ಸಾಧ್ಯ ಎಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಮಲ್ಲಿಕಾ. ಎಸ್. ಘಂಟಿ, ಆಳ್ವಾಸ್ ನುಡಿಸಿರಿಯ ಉಪಾಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News