ಬೊಮ್ಮರಬೆಟ್ಟು ಗ್ರಾಪಂ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ

Update: 2018-11-17 14:22 GMT

ಉಡುಪಿ, ನ.17: ಕಾಪು ತಾಲೂಕಿನ ಬೊಮ್ಮರಬೆಟ್ಟು ಗ್ರಾಪಂನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ವಿರುದ್ಧ ಬಿಜೆಪಿ ಬೆಂಬಲಿತ ಸದಸ್ಯರಿಂದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಯಾವುದೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪಗಳಿಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎಂಬ ಕಾರಣಕ್ಕಾಗಿ ಬಿಜೆಪಿ ಬೆಂಬಲಿತ ಸದಸ್ಯರಿಂದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷೆ ಮಾಲತಿ ಬಿ. ಆಚಾರ್ಯ ತಿಳಿಸಿದ್ದಾರೆ.

ಈ ಹಿಂದೆ ಅವಿಶ್ವಾಸ ಗೊತ್ತುವಳಿ ಮಂಡನೆಗಾಗಿ ತನ್ನ ಮೇಲೆ ಭ್ರಷ್ಟಾಚಾರ ಆರೋಪದ ಪಟ್ಟಿಯನ್ನು ಕುಂದಾಪುರದ ಸಹಾಯಕ ಕಮಿಷನರ್ ಅವರಿಗೆ ನೀಡಿದ್ದು, ಎಸಿ ಅವರು ಈ ಕುರಿತು ತನಿಖೆ ನಡೆಸಿ ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರವಾಗಿದೆ ಎಂದು ಹೇಳಿ ಅವಿಶ್ವಾಸ ಮಂಡನೆಯನ್ನು ತಿರಸ್ಕರಿಸಿದ್ದರು.

ಆದರೆ ಕೆಲವೇ ದಿನಗಳ ಅಂತರದಲ್ಲಿ ನ.14ರಂದು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅಧಿಕಾರಿಗಳು ದಿನಾಂಕವನ್ನು ನಿಗದಿ ಪಡಿಸಿದ್ದರು. ಇದಕ್ಕೆ ರಾಜ್ಯ ಉಚ್ಛ ನ್ಯಾಯಾಲಯ ಇದೀಗ ತಡೆಯಾಜ್ಞೆ ನೀಡಿದ್ದು, ನ್ಯಾಯದ ಭರವಸೆ ಮೂಡಿಸಿದೆ ಎಂದು ಮಾಲತಿ ಬಿ.ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News