​ಹೊಸ ಪಿಂಚಣಿ ಯೋಜನೆ ರದ್ದು ಪಡಿಸದಿದ್ದರೆ ಪ್ರತಿಭಟನೆ: ಎಚ್.ಕೆ.ರಾಮು

Update: 2018-11-17 14:29 GMT

ಮಂಗಳೂರು, ನ.17: ಸರಕಾರ ಜಾರಿಗೊಳಿಸಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆ ಪಿಂಚಣಿಯನ್ನು ಜಾರಿಗೊಳಿಸದೆ ಇದ್ದರೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ಕೆ.ರಾಮು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದ ಮುಖ್ಯ ಮಂತ್ರಿಯವರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.ಹಲವು ಸುತ್ತಿನ ಮಾತುಕತೆ ನಡೆದಿದೆ.ಸಂಘದ ಮನವಿಗೆ ಸಕಾರತ್ಮಕವಾಗಿ ಸ್ಪಂದಿಸಿರುವ ಅವರು ಹೊಸ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾಧಕ -ಭಾದಕಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಉಪಸಮಿತಿಯನ್ನು ರಚಿಸುವುದಾಗಿ ತಿಳಿಸಿದ್ದಾರೆ.

ಪೂರ್ಣ ಪಿಂಚಣಿ ಸವಲತ್ತಿಗೆ ಕೇಂದ್ರದ ಮಾದರಿಯಲ್ಲಿ 30ವರ್ಷಗಳ ಅರ್ಹತಾದಾಯಕ ಸೇವೆ ಪರಿಗಣನೆಗೆ ವಾರ್ಷಿಕ ವೇತನ ಬಡ್ಡಿಗಳನ್ನು ಪ್ರತಿ ವರ್ಷ ಜನವರಿ1 ಮತ್ತು ಜುಲೈ 1ರಂದು ಮಂಜೂರು ಮಾಡುವ ಬಗ್ಗೆ ಹಾಗೂ ಪ್ರತಿ ತಿಂಗಳ ಎರಡನೆ ಮತ್ತು ನಾಲ್ಕನೆ ಶನಿವಾರ ರಜೆ ಎಂದು ಘೋಷಿಸುವ ಬೇಡಿಕೆಗೆ ಮುಖ್ಯ ಮಂತ್ರಿ ಸ್ಪಂದಿಸಿದ್ದಾರೆ.

ಆರನೆ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಾಮರ್ಶಿಸಿ ಅನುಷ್ಠಾನಗೊಳಿಸಲು ಸಂಘ ಮನವಿ ಮಾಡಿದೆ ಎಂದು ಎಚ್.ಕೆ.ರಾಮು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಮುಂದಿನ ಬೆಳಗಾವಿ ಅಧಿವೇಶನದ ಮೊದಲು ಹೊಸ ಪಿಂಚಣಿ ಯೋಜನೆಯನ್ನುರದ್ದು ಪಡಿಸುವ ತೀರ್ಮಾನ ಕೈಗೊಳ್ಳದೆ ಇದ್ದರೆ. ಡಿ.14ರೊಳಗೆ ಪ್ರತಿಭಟನೆ ನಡೆಸಲಾಗುವುದು.12ವರ್ಷದಲ್ಲಿ ಪಿಂಚಣಿ ಹೆಸರಿನಲ್ಲಿ ಉಳಿತಾಯದವಾದ 12 ಸಾವಿರ ಕೋಟಿ ಹಣ ಎಲ್ಲಿ ವಿನಿಯೋಗವಾಗಿದೆ ಎನ್ನುವ ಮಾಹಿತಿ ಸರಕಾರ ನಮಗೆ ನೀಡಬೇಕಾಗಿದೆ ಎಂದು ರಾಮು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘದ ಗೌರವಾಧ್ಯಕ್ಷ ವಿ.ಎಂ.ನಾರಾಯಣ ಸ್ವಾಮಿ,ಪ್ರಧಾನ ಕಾರ್ಯದರ್ಶಿ ಮಾಲತೇಶ ವೈ ಅಣ್ಣಿ ಗೇರಿ,ಸಂಘದ ಕಾರ್ಯಾಧ್ಯಕ್ಷ ಪುಟ್ಟ ಸ್ವಾಮಿ,ಕೊಶಾಧಿಕಾರಿ ಎಸ್‌ಷಡಕ್ಷರಿ,ಹಿರಿಯ ಉಪಾಧ್ಯಕ್ಷ ಕೆ.ಜಿ ಅಂಜನಪ್ಪ,ದ.ಕ ಜಿಲ್ಲಾ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News