ಕಾನೂನು ರಚನೆಯಲ್ಲಿ ನ್ಯಾಯಾಲಯದ ಪ್ರವೇಶ ಚರ್ಚಾಸ್ಪದ: ತುಷಾರ್ ಮೆಹ್ತಾ

Update: 2018-11-17 14:33 GMT

ಮಂಗಳೂರು, ನ. 17: ಕಾನೂನು ರೂಪಿಸುವ ಅಧಿಕಾರ ಸಂವಿಧಾನದತ್ತವಾಗಿ ಶಾಸಕಾಂಗಕ್ಕೆ ಇದೆ. ಆದರೆ ದೇಶದಲ್ಲಿ ಕಾನೂನು ರೂಪಿಸಲು ನ್ಯಾಯಾಲಯ ಹೊರಟಿರುವುದು ಚರ್ಚಾಸ್ಪದ ಸಂಗತಿಯಾಗಿದೆ ಎಂದು ಭಾರತ ಸರಕಾರದ ಸಾಲಿಸಿಟ್ ರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಇದರ ವತಿಯಿಂದ ಹಮ್ಮಿಕೊಂಡ ಬೆಳ್ಳಿ ಹಬ್ಬದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದ ಸಂವಿಧಾನದ ಪ್ರಕಾರ ಕಾನೂನು ರೂಪಿಸುವ ಅಧಿಕಾರ ಇಲ್ಲಿನ ಸಮಾಜ ಅಂದರೆ ಅವರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಿರುವ ಶಾಸಕಾಂಗಕ್ಕೆ ನೀಡಲಾಗಿದೆ. ಆದರೆ ಇತ್ತೀಚೆಗೆ ನ್ಯಾಯಾಲಯವೆ ಕಾನೂನು ರೂಪಿಸಲು ನಿರ್ದೇಶನ ನೀಡುತ್ತಿರುವುದು ಸಂವಿಧಾನದ ಪಾವಿತ್ರತೆಯ ಪ್ರಶ್ನೆಯಾಗಿದೆ. ಇತ್ತೀಚಿಗೆ ಸಂವಿಧಾನದ 377 ವಿಧಿಯ ವಿಚಾರದಲ್ಲಿನ ತೀರ್ಪು , ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ನ್ಯಾಯಾಲಯದ ನಿರ್ದೇಶನ ವಿಚಾರಗಳನ್ನು ಸಂವಿಧಾನದ ಪರಿಮಿತಿಯಲ್ಲಿ ಯೋಚಿಸಬೇಕಾಗಿದೆ. ಸಮಾಜದ ನೈತಿಕತೆಯನ್ನು ನ್ಯಾಯಾಲಯ ನಿರ್ಧರಿಸುವುದು ಎಷ್ಟು ಸರಿ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಸಂವಿಧಾನದ ಪ್ರಮುಖ ಅಂಗಗಳಾದ ಕಾರ್ಯಾಂಗ, ಶಾಸಕಾಂಗಗಳು ಎಡವಿದಾಗ ಅವುಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಾದ ನ್ಯಾಯಾಂಗ ನೇರವಾಗಿ ಅವುಗಳ ಕೆಲಸವನ್ನು ಮಾಡಲು ಮುಂದಾಗುವುದು ಸಂವಿಧಾನದ ನೈತಿಕತೆಗೆ ಸವಾಲಾಗಿದೆ ಎಂದು ತುಷಾರ್ ಮೆಹ್ತಾ ತಿಳಿಸಿದರು.

ಸಮಾಜದಲ್ಲಿ ಶಾಂತಿ ಸ್ಥಾಪನೆ ನ್ಯಾಯದಾನದ ಗುರಿ:- ಸಮಾಜದಲ್ಲಿ ಶಾಂತಿ ಸ್ಥಾಪನೆ ನ್ಯಾಯದಾನದ ಗುರಿಯಾಗಿದೆ.ಪ್ರಾಚೀನ ಕಾಲದಿಂದಲೂ ಸಮಾಜದಲ್ಲಿ ನ್ಯಾಯದಾನದ ವ್ಯವಸ್ಥೆ ಇತ್ತು. ಅವುಗಳ ಅಂತಿಮ ಗುರಿ ಕುಟುಂಬ,ಸಮಾಜದಲ್ಲಿ ಶಾಂತಿ ಸ್ಥಾಪಿಸುವುದಾಗಿತ್ತು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಇಬ್ಬರ ನಡುವಿನ ವಿವಾದಗಳನ್ನು ಪರಸ್ಪರ ಮಾತುಕತೆಯೊಂದಿಗೆ ಬಗೆ ಹರಿಸುವ ಕೆಲಸ ನ್ಯಾಯಾದಾನ ಕೇಂದ್ರಗಳಿಂದ ನಡೆದುಕೊಂಡು ಬರುತ್ತಿದೆ.ಹಿಂದಿನ ಗ್ರಾಮ ಪಂಚಾಯತ್‌ಗಳು ಈ ರೀತಿಯ ಕೆಲಸಗಳನ್ನು ನಿರ್ವಹಿಸಿಕೊಂಡು ಸಮಾಜದಲ್ಲಿ ಶಾಂತಿ ನೆಲಸಲು ಕಾರಣವಾಗಿತ್ತು.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಈ ರೀತಯ ನ್ಯಾಯದಾನದ ವ್ಯವಸ್ಥೆ ನೂರಾರು ವರುಷಗಳಿಂದ ನಡೆದುಕೋಂಡು ಬರುತ್ತಿದೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಸಮಾರಂಭದಲ್ಲಿ ಭಾರತ ಸರಕಾರದ ಹೆಚ್ಚುವರಿ ಸಾಲಿಸೀಟರ್ ಜನರಲ್ ಕೆ.ಎಂ.ನಟರಾಜ್, ಎಸ್‌ಡಿಎಂ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಆರ್.ಬಲ್ಲಾಳ್,ಉಪಾಧ್ಯಕ್ಷ ಉದಯ ಪ್ರಕಾಶ್ ಮುಳಿಯ ಉಪಸ್ಥಿತರಿದ್ದರು. ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಸ್ವಾಗತಿಸಿದರು. ಡಾ.ಬಾಲಿಕಾ ವಂದಿಸಿದರು.ಆದಿತ್ಯ ರಯಾನ್ ಡಿಮೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News