ಕೊಣಾಜೆ ಗ್ರಾಮ ಪಂ. ಅಧ್ಯಕ್ಷ ಚುನಾವಣೆ: ನಝರ್ ಷಾ ಪಟ್ಟೋರಿ ಅಧ್ಯಕ್ಷರಾಗಿ ಆಯ್ಕೆ

Update: 2018-11-17 14:47 GMT

ಕೊಣಾಜೆ, ನ. 17:  ಮಂಗಳೂರು ವಿಧಾನ ಸಭಾ ಕ್ಷೇತ್ರದ ಕೊಣಾಜೆ ಗ್ರಾಮ ಪಂ. ಎರಡನೆ ಅವಧಿಯ ಅಧ್ಯಕ್ಷರಾಗಿ ನಝರ್ ಷಾ ಪಟ್ಟೋರಿ ಅವರು ಕೊಣಾಜೆ ಪಂಚಾಯಿತಿಯಲ್ಲಿ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಕೊಣಾಜೆ ಗ್ರಾಮ ಪಂ. ಸದಸ್ಯರಾಗಿ ಸತತ ಮೂರು ಬಾರಿ ಆಯ್ಕೆಯಾಗಿರುವ ನಝರ್ ಷಾ ಪಟ್ಟೋರಿ ಅವರು 29 ಸದಸ್ಯ ಬಲದ ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 18 ಹಾಗೂ ಬಿಜೆಪಿ ಬೆಂಬಲಿತ 11 ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ ಎಲ್ಲ 18 ಸದಸ್ಯರ ಮತಗಳನ್ನು ಪಡೆದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ರಾಮಚಂದ್ರ ಗಟ್ಟಿ ಅವರು 11ಮತಗಳನ್ನು ಪಡೆದು ತೃಪ್ತರಾದರು.

ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ 18 ಸದಸ್ಯರು ಆಯ್ಕೆಯಾದಾಗಲೇ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಸದಸ್ಯರು ಆಕಾಂಕ್ಷಿಗಳಾಗಿದ್ದರೂ ನಝರ್ ಷಾ ಹಾಗೂ ಶೌಕತ್ ಅಲಿ ನಡುವೆ ಸ್ಪರ್ಧೆ ಇದ್ದುದರಿಂದ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಡುವೆ ನಡೆದ ಮಾತುಕತೆಯಂತೆ ಎರಡೂವರೆ ವರ್ಷ ಅವಧಿಯ ಅಧಿಕಾರ ಹಂಚುವ ಒಪ್ಪಂದ ಏರ್ಪಟ್ಟಿತ್ತು. ಅದರಂತೆ ಶೌಕತ್ ಅಲಿ ಅವರು ಮೊದಲ ಅವಧಿಗೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು ಚುನಾವಣೆಯ ಕಾರಣದಿಂದ ಕೆಲವು ತಿಂಗಳು ಮುಂದೆ ಸಾಗಿದರೂ ಇದೀಗ ಅವರು ಅಧಿಕಾರ ಬಿಟ್ಟುಕೊಟ್ಟಿದ್ದು ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ನಝರ್ ಷಾ ಅಧ್ಯಕ್ಷರಾಗಿ ಆಯ್ಕೆಯಾದರು.

ಕೊಣಾಜೆ ಗ್ರಾಮ ಸಮಿತಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಯುವ ಕಾಂಗ್ರೆಸ್ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ನಝರ್ ಗ್ರಾಮ ಚಲೋ ಕಾರ್ಯಕ್ರಮದ ಮೂಲಕ ಖ್ಯಾತಿಯನ್ನು ಗಳಿಸಿದ್ದರು.

ಗ್ರಾಮದಲ್ಲಿರುವ ಎಲ್ಲಾ ಜಾತಿ ವರ್ಗದ ಜನರನ್ನು ಒಟ್ಟುಗೂಡಿಸಿ ಗ್ರಾಮದ ಅಭಿವೃದ್ದಿಗಾಗಿ ಪಣ ತೊಡುತ್ತೇನೆ. ಹಾಗೆಯೇ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಮಾಜದ ಪ್ರತಿಯೊಬ್ಬ ಅರ್ಹರಿಗೂ ಜಾತಿಬೇಧ, ಪಕ್ಷಬೇಧವಿಲ್ಲದೆ ತಲಪುವಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ.

-ನಝರ್ ಷಾ ಪಟ್ಟೋರಿ, ಕೊಣಾಜೆ ಗ್ರಾ.ಪಂ. ನೂತನ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News