ಸ್ವಸಾಮರ್ಥ್ಯದಿಂದ ಜೀವನದಲ್ಲಿ ಯಶಸ್ಸು ಸಾಧಿಸಿ: ಡಾ. ಭಟ್ಟಾಚಾರ್ಯ

Update: 2018-11-17 15:13 GMT

ಮಣಿಪಾಲ, ನ.17: ಒತ್ತಡ ಹಾಗೂ ಪ್ರತಿಕೂಲ ಪರಿಸ್ಥಿತಿ ನಿಮಗೆದುರಾಗ ಬಹುದು. ಉಜ್ವಲ ನಾಳಿನ ಆಶಾವಾದ ಹಾಗೂ ತಾರ್ಕಿಕತೆಗಳ ಮೂಲಕ ಧೈರ್ಯದಿಂದ ಅವುಗಳನ್ನು ಎದುರಿಸಿ. ಜೀವನದಲ್ಲಿ ವೈಫಲ್ಯತೆ ಎದುರಾದಾಗ ಲೆಲ್ಲಾ ಪ್ರತಿ ಬಾರಿ ಅವುಗಳನ್ನು ಎದುರಿಸಿ ನಿಲ್ಲುವ ಕೆಚ್ಚೆದೆ ತೋರಿ. ಇದೇ ನಿಮ್ಮ ಬದುಕಿನ ಅತ್ಯುತ್ತಮ ಸಾಧನೆಯಾಗಿದೆ ಎಂದು ದೇಶದ ಅಗ್ರಮಾನ್ಯ ತಾಂತ್ರಿಕ ವಿದ್ಯಾಸಂಸ್ಥೆಗಳಲ್ಲೊಂದಾದ ರಾಜಸ್ತಾನ ಪಿಲಾನಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಟ್ಸ್ ಪಿಲಾನಿ)ಯ ಕುಲಪತಿ ಪ್ರೊ. ಸೌವಿಕ್ ಭಟ್ಟಾಚಾರ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಶನಿವಾರ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ 26ನೇ ಘಟಿಕೋತ್ಸವದ ಎರಡನೇ ದಿನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣದಲ್ಲಿ ಅವರು ಮಾತನಾಡುತಿದ್ದರು.

ಉನ್ನತ ಸಂಸ್ಕೃತಿ ನಿಮ್ಮ ಗುರಿಯಾಗಬೇಕು. ಮುಂದಿನ ಜೀವನದಲ್ಲಿ ಸ್ವಸಾಮರ್ಥ್ಯದಿಂದ ಯಶಸ್ಸು ಸಾಧಿಸುವ ಛಲವಿರಲಿ ಎಂದವರು ಪದವೀಧರ ರಾಗಿ ಜೀವನದಲ್ಲಿ ಮುಂದಿನ ಹಂತದ ಬದುಕಿಗೆ ಸಿದ್ಧರಾದ ಯುವಕ-ಯುವತಿ ಯರಿಗೆ ಕಿವಿಮಾತು ಹೇಳಿದ ಡಾ.ಭಟ್ಟಾಚಾರ್ಯ, ಅದಕ್ಕೆ ಮಾಹೆಯಲ್ಲಿ ಪಡೆದ ಶಿಕ್ಷಣವೇ ನಿಮ್ಮ ಅಡಿಗಲ್ಲಾಗಲಿ ಎಂದು ಹಾರೈಸಿದರು.

ಬದುಕಿನ ಪ್ರತಿಕ್ಷಣವನ್ನು ಹೊಸತಿನ ಕಲಿಯುವಿಕೆಗೆ ಮೀಸಲಿರಿಸಿ. ಜೀವನ ದಲ್ಲಿ ಯಾವುದೇ ಕ್ಷೇತ್ರಕ್ಕೆ ಹೋದರೂ, ಅತ್ಯುನ್ನತ ನೈತಿಕ ಮಟ್ಟದ ಗೌರವವನ್ನು ಮಾತ್ರ ಮುಕ್ಕಾಗಲು ಬಿಡಬೇಡಿ. ಜೀವನದಲ್ಲಿ ಸಫಲತೆಯನ್ನು ಪಡೆಯುವತ್ತ ನಿಮ್ಮ ಗಮನವಿರಲಿ. ಆದರೆ ಅದಕ್ಕೆ ಯಾವುದೇ ವಾಮಮಾರ್ಗ ಹಿಡಿಯದಂತೆ ಎಚ್ಚರವಿರಲಿ ಎಂದು ಕಿವಿಮಾತು ಹೇಳಿದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ವಿ.ಸುರೇಂದ್ರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಡಾ.ಪೂರ್ಣಿಮಾ ಬಾಳಿಗಾ ವಾಹೆಯ ಪಕ್ಷಿನೋಟವನ್ನು ನೀಡಿದರು.  ಇಂದು ಎಂಐಟಿ ಮಣಿಪಾಲದ ಶ್ರೇಯಾ ಆರ್.ಐತಾಳ್, ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ದೀಕ್ಷಾ ಭಟ್ ಹಾಗೂ ಮಣಿಪಾಲ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಇಮ್ಯಾಕುಲೇಟ್ ಕ್ರಿಸ್ಟಿನಾ ಅವರಿಗೆ ಡಾ.ಟಿಎಂಎ ಪೈ ಚಿನ್ನದ ಪದಗಳನ್ನು ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News