ಗ್ರಾಪಂನ ಕಟ್ಟಡ ಬಾಡಿಗೆಗೂ ಮೀಸಲಾತಿ ಅನುಸರಿಸಿ: ದಿನಕರ ಬಾಬು

Update: 2018-11-17 15:14 GMT

ಉಡುಪಿ, ನ.17: ಗ್ರಾಮ ಪಂಚಾಯತ್‌ನ ಕಟ್ಟಡಗಳನ್ನು ಬಾಡಿಗೆ ನೀಡುವ ಸಮಯದಲ್ಲಿ ಕಡ್ಡಾಯವಾಗಿ ಮೀಸಲಾತಿ ನಿಯಮಗಳನ್ನು ಅನುಸರಿಸುವಂತೆ ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಹೇಳಿದ್ದಾರೆ.

ಶನಿವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯ ಎಲ್ಲಾ ಗ್ರಾಪಂ ಗಳು ನಿರ್ಮಿಸಿರುವ ಕಟ್ಟಡಗಳನ್ನು ಬಾಡಿಗೆಗೆ ನೀಡುವಾಗ ಸರಕಾರ ನಿಗದಿ ಪಡಿಸಿರುವ ಪರಿಷ್ಕೃತ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸ ಬೇಕು. ಅರ್ಹ ವರ್ಗದ ಫಲಾನುಭವಿಗೆ ಬಾಡಿಗೆಗೆ ನೀಡುವ ಕುರಿತು ಸೂಕ್ತ ನಿರ್ದೇಶನ ನೀಡುವಂತೆ ಎಲ್ಲಾ ತಾಪಂ ಕಾರ್ಯ ನಿರ್ವಹಣಾಧಿ ಕಾರಿಗಳಿಗೆ ಸೂಚಿಸಿದ ಅಧ್ಯಕ್ಷರು, ಬಾಡಿಗೆಗೆ ನೀಡಿರುವ ಕಟ್ಟಡದ ಬಾಡಿಗೆಯನ್ನು ಸಕಾಲದಲ್ಲಿ ವಸೂಲಿ ಮಾಡುವಂತೆಯೂ ಸೂಚಿಸಿದರು.

ಈ ಬಾರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಕಿಂಡಿ ಅಣೆಕಟ್ಟು ಗಳಿಗೆ ಹಲಗೆಗಳನ್ನು ಹಾಕಿ ನೀರು ನಿಲ್ಲಿಸುವಂತೆ ಸಣ್ಣ ನೀರಾವರಿ ಮತ್ತು ಪಿಆರ್‌ಇಡಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅಧ್ಯಕ್ಷರು, ಡಿಸೆಂಬರ್ ಅಂತ್ಯದ ವೇಳೆಗೆ ಹಲಗೆ ಹಾಕುವ ಕೆಲಸ ಪೂರ್ಣಗೊಳಿಸುವಂತೆ ಹಾಗೂ ಈ ಕುರಿತು ಎಲ್ಲಾ ತಾಲೂಕುಗಳ ಕಾರ್ಯ ನಿರ್ವಹಣಾಧಿಕಾರಿಗಳು ಗಮನ ಹರಿಸುವಂತೆ ಹಾಗೂ ನೀರು ಸರಬರಾಜು ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್‌ಗೆ ಸೂಚಿಸಿದರು.

ಗ್ರಾಪಂಗಳ ತೆರಿಗೆ ಪರಿಷ್ಕರಣೆ ಕುರಿತಂತೆ ಹಲವು ಗ್ರಾಪಂಗಳಲ್ಲಿ ತೆರಿಗೆ ಪರಿಷ್ಕರಣೆ ನಡೆದಿಲ್ಲ. ನವೆಂಬರ್ ಅಂತ್ಯದ ವೇಳೆಗೆ ತೆರಿಗೆ ಪರಿಷ್ಕರಣೆ ಮಾಡಿ, ಡಿಸೆಂಬರ್‌ನಿಂದ ವಸೂಲಿ ಮಾಡುವಂತೆ ಎಲ್ಲಾ ತಾಲೂಕುಗಳ ಕಾರ್ಯ ನಿರ್ವಹಣಾಧಿಕಾರಿಗಳು ಗಮನಹರಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 1499 ಕ್ವಿಂಟಾಲ್ ಭಿತ್ತನೆ ಬೀಜ ವಿತರಿಸಿ ಶೇ.71 ಸಾಧನೆ ಹಾಗೂ 2450 ಟನ್ ರಸಗೊಬ್ಬರ ವಿತರಿಸಿ ಶೇ.102 ಸಾಧನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.

ಈ ಬಾರಿ ಪ್ರಾಕೃತಿಕ ವಿಕೋಪದಿಂದ ಕಡಲ ಮೀನು ಉತ್ಪಾದನೆ ಕಡಿಮೆಯಾಗಿದ್ದು, ಶೇ.86 ಸಾಧನೆ ಆಗಿದೆ.ಆದರೆ ನಾಡದೋಣಿ ಮೀನುಗಾರಿಕೆ ಉತ್ತಮವಾಗಿದೆ. ಮಹಿಳಾ ಮೀನುಗಾರರಿಗೆ ನೀಡುವ ಬಡ್ಡಿ ಸಬ್ಸಿಡಿ ಮೊತ್ತ 2.27 ಕೋಟಿ ರೂ.ಗಳನ್ನು ಬ್ಯಾಂಕ್‌ಗಳಿಗೆ ಪಾವತಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ್ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News