ಕೀರ್ತನೆಗಳ ಮೂಲಧಾತು ಇರುವುದು ಸಂಭೋದನೆಯಲ್ಲಿ: ಡಾ. ಎಚ್.ಎನ್ ಮುರುಳೀಧರ

Update: 2018-11-17 17:17 GMT

ಮೂಡುಬಿದಿರೆ, ನ.17: ದಾಸರು ಅಭಿವ್ಯಕ್ತಿಯಲ್ಲಿ ಬಹುರೂಪತ್ವವನ್ನು ಅನುಸರಿಸಿದ್ದಲ್ಲದೆ ಏಕರೂಪದ ಸೈದ್ಧಾಂತಿಕತೆಯ ಅಸಮ್ಮತಿಯನ್ನು ತಮ್ಮ ಕೀರ್ತನೆಗಳ ಮೂಲಕ ತೋರ್ಪಡಿಸುತ್ತಾ ಹೋದರು. ಯಾವ ಪಠ್ಯ ಸಂಬೋಧನೆ ಮಾಡುವುದಿಲ್ಲವೋ ಅದು ಸ್ವೀಕರಿಸುವ ಸಮುದಾಯವನ್ನು ಮಾನ್ಯ ಮಾಡುವುದಿಲ್ಲ, ಕೀರ್ತನೆಗಳ ಮೂಲಧಾತು ಇರುವುದೇ ಸಂಬೋಧನೆಯಲ್ಲಿ ಎಂದು ಸಂಶೋಧಕ ಡಾ. ಎಚ್. ಎನ್ ಮುರುಳೀಧರ್ ತಿಳಿಸಿದರು.

ಆಳ್ವಾಸ್ ನುಡಿಸಿರಿಯ ಎರಡನೇ ದಿನದ ಮೊದಲ ಗೋಷ್ಠಿ ಕರ್ನಾಟಕ ದರ್ಶನ, ಅಧ್ಯಾತ್ಮ ಪರಂಪರೆಯಲ್ಲಿ ಕೀರ್ತನೆಗಳ ಬಗ್ಗೆ ಅವರು ತಮ್ಮ ವಿಚಾರ ಮಂಡಿಸಿದರು.

ಸಿದ್ಧಾಂತದ ಕಡೆಯಿಂದ ಮನುಷ್ಯರನ್ನು ನೋಡುತ್ತಿದ್ದ ಪಂಡಿತ ಮಂಡಳಿಗೆ ಪ್ರತ್ಯುತ್ತರ ನೀಡುವ ಸಲುವಾಗಿ ಕೀರ್ತನೆಗಳು ಹುಟ್ಟಿಕೊಂಡದಲ್ಲದೆ ಕೀರ್ತನೆ ಗಳು ಮನುಷ್ಯನ ಕಡೆಯಿಂದ ಸಿದ್ಧಾಂತವನ್ನು ನೋಡಲೆತ್ನಿಸಿತು. ಹಲವು ದನಿಗಳ ಮೂಲಕ ಮಾತನಾಡಿದ ದಾಸರು ಪ್ರಯೋಗದ ಉದ್ದೇಶವನ್ನಿರಿಸಿ ಕೊಳ್ಳದೆ ವಿಸ್ತರಣೆಯ ಚಿಂತನೆಯನ್ನು ಮೈಗೂಡಿಸಿಕೊಂಡರು ಎಂದು ಹೇಳಿದರು.

ಸ್ಥಳೀಯ ದೈನಂದಿನ ವಿವರಗಳ ವಾಸ್ತವದ ನೆಲೆಯಲ್ಲಿ ಅಧ್ಯಾತ್ಮದ ನೆಲೆಯನ್ನು ಕಟ್ಟಿದ ಕೀರ್ತನಕಾರರು ಮೂರ್ತದ ಆರಾಧಕರಾದರು. ಪಂಡಿತ ಮಂಡಳಿಗೆ  ಕ್ರಿಯಾ-ಕರ್ಮಗಳ ಕಂತೆಯಾದ ಅಧ್ಯಾತ್ಮವನ್ನು ದಾಸರು ಮದ್ಯವರ್ತಿಗಳಿಂದ ಮುಕ್ತಗೊಳಿಸಿ ಶ್ರೀಸಾಮಾನ್ಯರತ್ತ ಹರಿಸಲು ಯತ್ನಿಸಿದರು ಎಂದು ಅಭಿಪ್ರಾಯಪಟ್ಟರು.

ಕೀರ್ತನಕಾರರು ಲೋಕೈಕ ಮತ್ತು ಅಧ್ಯಾತ್ಮವನ್ನು ಬೇರೆ ಬೇರೆ ಮಾಡದೆ ದೈನಂದಿನ ಕೆಲಸ ಕಾರ್ಯದಲ್ಲಿ ಹೊರಹೊಮ್ಮುವುದೇ ಅಧ್ಯಾತ್ಮ ಎಂಬ ತತ್ವವನ್ನು ಸಾರಿದರು. ಅಸ್ತಿತ್ವದ ಅಗಾಧತೆಗೆ, ಅನಂತತೆಗೆ ಶರಣಾಗುವುದೇ ದಾಸರ ಚಿಂತನೆಯಾಗಿದ್ದು ದಾಸರಲ್ಲಿ ಸಾಧನೆಯಾವುದು? ಸಿದ್ಧಿಯಾವುದು? ಎಂಬುದನ್ನು ಅರಿಯಲು ಕಷ್ಟಸಾಧ್ಯ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷೆ ಡಾ.ಮಲ್ಲಿಕಾ ಎಸ್. ಘಂಟಿ, ಆಳ್ವಾಸ್ ನುಡಿಸಿರಿ ಉಪಾಧ್ಯಕ್ಷ ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ವಿದ್ವಾನ್ ವಿನಾಯಕ್ ಭಟ್ ಗಾಳಿಮನೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News