ಮಕ್ಕಳನ್ನು ಕನಸುಗಳ ವಾರಿಸುದಾರರನ್ನಾಗಿ ಮಾಡಬೇಡಿ: ಸುಧಾ ಆಡುಕಳ

Update: 2018-11-18 11:27 GMT

ಉಡುಪಿ, ನ.18: ಪೋಷಕರು ತಮ್ಮ ಮಕ್ಕಳು ವೈದ್ಯ, ಇಂಜಿನಿಯರ್ ಆಗ ಬೇಕೆಂಬ ಕನಸುಗಳನ್ನು ಅವರ ಮೇಲೆ ಹೇರುತ್ತಿರುವುದು ಸರಿಯಲ್ಲ. ಮಕ್ಕಳನ್ನು ಪೋಷಕರ ಕನಸುಗಳನ್ನು ನನಸು ಮಾಡುವ ವಾರಿಸುದಾರರನ್ನಾಗಿ ಮಾಡ ಬಾರದು ಎಂದು ಉಡುಪಿ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಧಾ ಆಡುಕಳ ಹೇಳಿದ್ದಾರೆ.

ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮಕ್ಕಳ ಮಾರ್ಗ ದರ್ಶನ ಕೇಂದ್ರದ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಆಸ್ಪತ್ರೆಯ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದು.

ಮಕ್ಕಳಿಗೆ ಪ್ರೀತಿ ಕೊಡಿ. ಅವರ ಕನಸುಗಳನ್ನು ಅರಿತುಕೊಳ್ಳುವ ಕೆಲಸ ಮಾಡ ಬೇಕು. ನೀವು ಮಕ್ಕಳಂತೆ ಆಗಬೇಕೆ ಹೊರತು ನಿಮ್ಮ ಹಾಗೆ ಮಕ್ಕಳನ್ನು ಮಾಡ ಬೇಡಿ. ಮಕ್ಕಳು ಪೋಷಕರಿಂದ ಪ್ರೀತಿ ಹಾಗೂ ಸಮಯವನ್ನು ನಿರೀಕ್ಷಿಸುತ್ತಾರೆ. ಆದರೆ ನಾವಿಂದು ಅವರ ಕೈಗೆ ಮೊಬೈಲ್‌ಗಳನ್ನು ನೀಡಿ ದೂರ ಮಾಡುತ್ತಿದ್ದೇವೆ. ಮಕ್ಕಳನ್ನು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೆಟ್ಟ ಚಟಗಳಿಂದ ದೂರ ಇಡಬಹುದಾಗಿದೆ ಎಂದರು.

ಮುಖ್ಯ ಆತಿಥಿಯಾಗಿ ಮಕ್ಕಳ ತಜ್ಞ ಡಾ.ವೇಣುಗೋಪಾಲ್ ಮಾತನಾಡಿ, ಮಕ್ಕಳು ಪೋಷಕರನ್ನು ಅನುಸರಿಸುವುದರಿಂದ ಪೋಷಕರು ಮಕ್ಕಳಿಗೆ ಮಾರ್ಗ ದರ್ಶಕರಾಗಬೇಕು. ಇದರಿಂದ ಮಕ್ಕಳನ್ನು ಉತ್ತಮವಾಗಿ ವಿಕಸನಗೊಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ.ಭಂಡಾರಿ ಮಾತನಾಡಿ, ಮಕ್ಕಳಿಗೆ ಗೆಲ್ಲುವುದನ್ನು ಮಾತ್ರ ಹೇಳಿಕೊಡದೆ ಸೋಲನ್ನು ಎದುರಿಸುವ ಮನೋಭಾವವನ್ನು ತಿಳಿಸಬೇಕು. ಮಕ್ಕಳಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ ಬೆಳೆಸುವ ಕಾರ್ಯವನ್ನು ಪೋಷಕರು ಮಾಡ ಬೇಕು ಎಂದು ಹೇಳಿದರು.

ಆಸ್ಪತ್ರೆಯ ಮನೋವೈದ್ಯ ಡಾ.ದೀಪಕ್ ಮಲ್ಯ, ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಉಪಸ್ಥಿತರಿದ್ದರು. ಧೃತಿ ಸ್ವಾಗತಿಸಿದರು. ವಿದ್ಯಾ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಸೌಮ್ಯ ವರದಿ ವಾಚಿಸಿದರು. ಹಮೀದ್ ವಂದಿಸಿದರು. ವೆನಿಶಾ ಮತ್ತು ಪ್ರತಿಕ್ಷಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆ ಹಾಗೂ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News