ಗ್ರಂಥಾಲಯ ಸಪ್ತಾಹ: ಉತ್ತಮ ಓದುಗ ಪ್ರಶಸ್ತಿ ಪ್ರದಾನ

Update: 2018-11-18 11:29 GMT

ಉಡುಪಿ, ನ.18: ಉಡುಪಿ ನಗರ ಕೇಂದ್ರ ಗ್ರಂಥಾಲಯದ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2018ರ ಸಮಾರೋಪ, ಉತ್ತಮ ಓದುಗ ಪ್ರಶಸ್ತಿ ಪ್ರದಾನ ಹಾಗೂ ಸಪ್ತಾಹದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವು ಶನಿವಾರ ದೊಡ್ಡಣ ಗುಡ್ಡೆ ಶಾಖಾ ಗ್ರಂಥಾಲಯದಲ್ಲಿ ನಡೆಯಿತು.

ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದ ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ ಮಾತನಾಡಿ, ಈಗಿನ ಯುವ ಜನತೆಗೆ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ಪುಸ್ತಕ ಓದುವ ಹವ್ಯಾಸ ಬೆಳೆಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಸ್ಥಳೀಯ ನಗರಸಬೆ ಸದಸ್ಯ ಪ್ರಭಾಕರ ಪೂಜಾರಿ ಉದ್ಘಾಟಿಸಿದರು. ಅಜ್ಜರಕಾಡು ಜಿ.ಶಂಕರ್ ಸರಕಾರಿ ಕಾಲೇಜಿನ ಪ್ರಾಂಶು ಪಾಲ, ನಗರ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಮೇಟಿ ಮುದಿಯಪ್ಪ ಮಾತನಾಡಿದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಂಥಾಲಯ ಓದುಗರಾದ ವಿಠಲ ಜಿ.ಪೂಜಾರಿ ಉಡುಪಿ, ಕೆ.ಸದಾನಂದ ದೊಡ್ಡಣಗುಡ್ಡೆ, ಅಹಲ್ಯಾ ಪೈ ಹೆರ್ಗ, ಎನ್.ವೇದವ್ಯಾಸ ಆಚಾರ್ಯ ಪುತ್ತೂರು, ಮೋಹನ್ ಕುಮಾರ್ ಬೈಲೂರು, ಮಮತಾ ರಮೇಶ್ ಶೆಟ್ಟಿ ಮೂಡುಬೆಟ್ಟು ಇವರಿಗೆ ಉತ್ತಮ ಓದು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆರಂಭದಲ್ಲಿ ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಭಾಗವಹಿಸು ವಿಕೆಯಲ್ಲಿ ಕನ್ನಡದ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಬಗ್ಗೆ ವಿಚಾರ ಕಮ್ಮಟ ನಡೆಯಿತು. ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ, ಅಜ್ಜರಕಾಡು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕುಸುಮ, ದೊಡ್ಡಣಗುಡ್ಡೆ ಹುಡ್ಕೋ ಕಾಲನಿ ನಿವಾಸಿಗಳ ಸಂಘದ ಅಧ್ಯಕ್ಷ ವಿಠಲ ಗಾಣಿಗ ಉಪಸ್ಥಿತರಿದ್ದರು.

ನಗರಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥಾಲಯದ ಪ್ರಥಮ ದರ್ಜೆ ಸಹಾಯಕಿ ಪ್ರೇಮ ಎಂ. ಕಾರ್ಯಕ್ರಮ ನಿರೂಪಿಸಿ, ಗ್ರಂಥಾಲಯ ಸಹಾಯಕಿ ಸುನೀತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News