ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: 1 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆ

Update: 2018-11-18 15:48 GMT

ಪ್ಯಾರಾಡೈಸ್ (ಕ್ಯಾಲಿಫೋರ್ನಿಯಾ, ಅಮೆರಿಕ),ನ.17: ಅಮೆರಿಕದ ಉತ್ತರದ ರಾಜ್ಯವಾದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಒಂದು ವಾರದಿಂದ ರುದ್ರತಾಂಡವವಾಡುತ್ತಿರುವ ಕಾಡ್ಗಿಚ್ಚಿನ ಹಾವಳಿಯಿಂದಾಗಿ ಈವರೆಗೆ ನಾಪತ್ತೆಯಾದವರ ಸಂಖ್ಯೆ ಶುಕ್ರವಾರದ ವೇಳೆಗೆ 1 ಸಾವಿರಕ್ಕೇರಿದೆ. ಈ ಮಧ್ಯೆ ಕಾಡ್ಗಿಚ್ಚಿಗೆ ಸಿಲುಕಿ ಮೃತಪಟ್ಟ 8 ಮಂದಿಯ ಶವಗಳನ್ನು ರಕ್ಷಣಾ ಕಾರ್ಯಕರ್ತರು ಶನಿವಾರ ಪತ್ತೆಹಚ್ಚಿದ್ದಾರೆ.

ಕಳೆದ24 ತಾಸುಗಳಲ್ಲಿ ಕಾಡ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 631ರಿಂದ 1011ಕ್ಕೇರಿದೆಯೆಂದು ಬ್ಯುಟ್ ಕೌಂಟಿಯ ಪೊಲೀಸ್ ವರಿಷ್ಠ ಕೊರಿ ಹೊನಿಯಾ ತಿಳಿಸಿದ್ದಾರೆ. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾಣೆಯಾಗಿರುವ ಬಗ್ಗೆ ತಮಗೆ ದೂರುಗಳು ಬಂದಿರುವುದಾಗಿ ಅವರು ಹೇಳಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಸಾವನ್ನಪ್ಪಿರುವ ಸಾಧ್ಯತೆಯ ಬಗ್ಗೆ ಭೀತಿ ವ್ಯಕ್ತವಾಗಿದೆ.

ಸುಟ್ಟುಕರಕಲಾದ ಎಂಟು ಮಂದಿ ಮಂದಿಯ ಶವಗಳನ್ನು ರಕ್ಷಣಾ ಕಾರ್ಯಕರ್ತರು ಪತ್ತೆಚ್ಚಿದ್ದು, ಇದರೊಂದಿಗೆ ಕಾಡ್ಗಿಚ್ಚಿಗೆ ಬಲಿಯಾದವರ ಅಧಿಕೃತ ಸಂಖ್ಯೆ 71ಕ್ಕೇರಿದೆಯೆಂದು ಅವರು ಹೇಳಿದ್ದಾರೆ. ನವೆಂಬರ್ 8ರಂದು ಉತ್ತರ ಕ್ಯಾಲಿಫೋರ್ನಿಯಾದ ತಪ್ಪಲು ಪ್ರದೇಶದಲ್ಲಿರುವ ಪ್ಯಾರಾಡೈಸ್ ಪಟ್ಟಣದ ಸಮೀಪದ ಸಿಯೆರಾ ನೆವಾಡ ಪರ್ವತ ಪ್ರಾಂತದ ತಪ್ಪಲಿನಲ್ಲಿ ಕಾಡ್ಗಿಚ್ಚು ಭುಗಿಲೆದ್ದಿದ್ದರಿಂದ ಸಾವಿರಾರು ಮಂದಿ ಸುರಕ್ಷಿತ ಪ್ರದೇಶಗಳಿಗೆ ಪಲಾಯನಗೈದಿದ್ದಾರೆ.

ಕ್ಯಾಂಪ್‌ಫೈರ್ ಎಂದೇ ಕರೆಯಲಾಗದ ಈ ಕಾಡ್ಗಿಚ್ಚಿನ ಅಟ್ಟಹಾಸಕ್ಕೆ 59 ಸಾವಿರ ಎಕರೆ ಪ್ರದೇಶ ಸುಟ್ಟುಹೋಗಿದ್ದು, ಆ ಪೈಕಿ ಶೇ.50ರಷ್ಟು ಪ್ರದೇಶದಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News