ಮಂಗಳೂರು: ‘ಜಾತಿ-ಭೇದಭಾವ ಮೀರಿ ನಿಂತ ಬಸವಣ್ಣ’

Update: 2018-11-18 17:07 GMT

ಮಂಗಳೂರು, ನ.18: ಶರಣರ ಮೂಲಕ ಬಸವಣ್ಣವರು ವಚನಗಳನ್ನು ರಚಿಸಲು ಶ್ರಮಿಸಿದ್ದರು. ಒಂದೊಂದು ವಚನವು ನಿಜ ಜೀವನದ ಮೌಲ್ಯಗಳನ್ನು ಎತ್ತಿ ತೋರಿಸುತ್ತಿತ್ತು. ಜಾತಿ-ಭೇದಭಾವವನ್ನು ಬಸವಣ್ಣನವರು ಮೀರಿ ನಿಂತಿದ್ದರು ಎಂದು ಶರಣ ಜಗನ್ನಾಥಪ್ಪ ಪನ್ಸಾಲೆ ಜನವಾಡ ತಿಳಿಸಿದರು.

ಶಕ್ತಿನಗರದ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಬೆಂಗಳೂರಿನ ಮಹಾಜಗದ್ಗುರು ಬಸವಣ್ಣ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ರವಿವಾರ ‘ಅನುಭಾವ ಸಂಗಮ’ ಕಾರ್ಯಕ್ರಮದಲ್ಲಿ ‘ವಚನಗಳಲ್ಲಿ ಜೀವನ ಮೌಲ್ಯಗಳು’ ಎಂಬ ಉಪನ್ಯಾಸ ನೀಡಿ ಅವರು ಮಾತನಾಡಿದರು.

1156ರಲ್ಲಿ ಬಸವಣ್ಣ ಅನುಭವ ಮಂಟಪವನ್ನು ರಚಿಸಿದರು. ಈ ಮಂಟಪದಲ್ಲಿ ಜೀವನ ಮೌಲ್ಯಗಳ ಕುರಿತಂತೆ ಚರ್ಚೆ, ಟೀಕೆಗಳು ನಡೆಯು ತ್ತಿದ್ದವು. 12ನೇ ಶತಮಾನದಲ್ಲಿ ಬಸವಣ್ಣ 770 ವಿವಿಧ ಕಾಯಕಗಳನ್ನು ಮಾಡುವ ಪಂಗಡಗಳ ನಾಯಕರನ್ನು ಸೇರಿಸಿ ಚಿಂತನಾಗೋಷ್ಠಿಗಳನ್ನು ನಡೆಸಿ ತನ್ನ ವಿಚಾರವನ್ನು ವ್ಯಕ್ತಪಡಿಸುತ್ತಿದ್ದರು. ಅಂದು ದೇಶದ ಉದ್ದಗಲದಿಂದ 1,96,000 ಶರಣರು ವಿಚಾರ ವಿನಿಮಯ ಮಾಡಿಕೊ ಳ್ಳುತ್ತಿದ್ದರು ಎಂದು ಮಾಹಿತಿ ನೀಡಿದರು.

ಅಂದಿನ ಕಾಲದಲ್ಲಿಯೂ ರಾಜಕೀಯ, ಶೈಕ್ಷಣಿಕ, ಆರ್ಥಿಕ, ನೈತಿಕ, ಅಧ್ಯಾತ್ಮ ಚಿಂತನೆಗಳಿಗೆ ವಿಶೇಷ ಒತ್ತು ನೀಡಲಾಗುತ್ತಿತ್ತು. ಕೆಲಸ ಮಾಡುವುದರಿಂದ ಮಾತ್ರ ಹೊಟ್ಟೆ ತುಂಬುತ್ತದೆ ಎನ್ನುವುದು ಬಸವಣ್ಣ ಅವರ ವಚನದಲ್ಲಿರುವ ಮಹತ್ವದ ವಿಚಾರ ಎಂದು ಜಗನ್ನಾಥ ಪನ್ಸಾಲೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾತನಾಡಿದ ಶಕ್ತಿ ಪಪೂ ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್., ಬಸವಣ್ಣನವರ ಆಚಾರ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಮೌಲ್ಯಗಳ ಸುಧಾರಣೆ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ ನಾಕ್, ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಸದಸ್ಯೆ ಸಗುಣ ಸಿ.ನಾಕ್, ರತ್ನಾವತಿ ಜೆ. ಬೈಕಾಡಿ ಉಪಸ್ಥಿತರಿದ್ದರು. ಶಕ್ತಿ ಪಪೂ ಉಪನ್ಯಾಸಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಸುಪ್ರಿಯ ಸ್ವಾಗತಿಸಿದರು. ನಿರಂಜನ್ ವಂದಿಸಿದರು. ಕಾರ್ಯಕ್ರಮದ ಬಳಿಕ ತುಳು, ಕನ್ನಡ ವಚನಗಳ ಗಾಯನವು ಇಂಚರ ತಂಡ ಉರ್ವಾ ಇವರಿಂದ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News