ಪುಟಾಣಿ ವಿದ್ಯಾರ್ಥಿಗೆ ಟ್ಯೂಷನ್ ಶಿಕ್ಷಕನಿಂದ ಚಿತ್ರಹಿಂಸೆ

Update: 2018-11-19 04:15 GMT

ಅಲೀಗಢ, ನ.19: ಎರಡನೇ ತರಗತಿಯ ಪುಟ್ಟ ವಿದ್ಯಾರ್ಥಿಗೆ ಟ್ಯೂಷನ್ ಶಿಕ್ಷಕನೊಬ್ಬ ಶೂನಿಂದ ಹೊಡೆದು ಬಳಿಕ ಗುದ್ದಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಅಲೀಗಢದಲ್ಲಿ ನಡೆದಿದೆ.

ಬಾಲಕನಿಗೆ ಚಿತ್ರಹಿಂಸೆ ನೀಡಿದ ಕೊಠಡಿಯ ಸಿಸಿಟಿವಿ ದೃಶ್ಯಾವಳಿಯನ್ನು ಪೋಷಕರು ವೀಕ್ಷಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಮೈಯಲ್ಲಿ ಕಪ್ಪು ಹಾಗೂ ನೀಲಿ ಕಲೆಗಳನ್ನು ಗಮನಿಸಿದ ಪೋಷಕರು, ಆತನನ್ನು ವಿಚಾರಿಸಿದಾಗ ಶಿಕ್ಷಕನ ಕ್ರೌರ್ಯದ ಬಗ್ಗೆ ಬಾಲಕ ಬಾಯಿ ಬಿಟ್ಟಿದ್ದಾನೆ.

"ವೀಡಿಯೊ ತುಣುಕನ್ನು ವಶಪಡಿಸಿಕೊಂಡು ಶಿಕ್ಷಕನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆತನ ಪತ್ತೆಗೆ ಶೋಧ ನಡೆದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶುತೋಶ್ ದ್ವಿವೇದಿ ಹೇಳಿದ್ದಾರೆ.

ಐದು ನಿಮಿಷದ ವೀಡಿಯೊ ತುಣುಕಿನಲ್ಲಿ, ಎರಡು ಕುರ್ಚಿಗಳಲ್ಲಿ ಶಿಕ್ಷಕ ಹಾಗೂ ಬಾಲಕ ಕುಳಿತಿರುವ ದೃಶ್ಯವಿದೆ. ಕೈಯಲ್ಲಿ ಶೂ ಹಿಡಿದಿರುವ ಶಿಕ್ಷಕ ಬಾಲಕನಿಗೆ ಹೊಡೆಯಲು ಮುಂದಾದ ದೃಶ್ಯವೂ ದಾಖಲಾಗಿದೆ. ಬಳಿಕ ಕೀಲಿಕೈಯಂಥ ಹರಿತ ಸಾಧನದಿಂದ ಬಾಲಕನ ಬೆರಳುಗಳನ್ನು ಚುಚ್ಚಲಾಗಿದೆ. ಬಾಲಕನ ತಲೆಗೂದಲು ಮತ್ತು ಕಿವಿ ಹಿಡಿದು ಎಳೆದು, ಬೆನ್ನಿನ ಮೇಲೆ ಗುದ್ದುತ್ತಿರುವುದೂ ಕಂಡುಬರುತ್ತಿದೆ. ಬಳಿಕ ಬಲಾತ್ಕಾರದಿಂದ ಒಂದು ಲೋಟ ನೀರು ಕುಡಿಸಿದ ಶಿಕ್ಷಕ, ನಗುವಂತೆ ಬಾಲಕನಿಗೆ ಹೇಳುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News