ಉಡುಪಿ: ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಬೀಡಿ ಕಾರ್ಮಿಕರಿಂದ ಧರಣಿ

Update: 2018-11-19 11:53 GMT

ಉಡುಪಿ, ನ.19: ಕನಿಷ್ಠ ವೇತನ ಸಾವಿರ ಬೀಡಿಗೆ 210ರೂ. ಜಾರಿ ಮಾಡುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್(ಸಿಐ ಟಿಯು) ಹಾಗೂ ಎಸ್.ಕೆ. ಬೀಡಿ ವರ್ಕರ್ಸ್‌ ಫೆಡರೇಶನ್(ಎಐಟಿಯುಸಿ) ನೇತೃತ್ವದಲ್ಲಿ ಬೀಡಿ ಕಾರ್ಮಿಕರು ಸೋಮವಾರ ಸಂತೆಕಟ್ಟೆಯಲ್ಲಿರುವ ಗಣೇಶ್ ಬೀಡಿಯ ಉಡುಪಿ ಡಿಪ್ಪೋ ಎದುರು ಧರಣಿ ನಡೆಸಿದರು.
 
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬೀಡಿ ಕಂಪೆನಿಗಳು ತಾವೇ ಒಪ್ಪಿಕೊಂಡ ಕನಿಷ್ಠ ವೇತನ ವನ್ನು ನೀಡದೆ ಇರುವುದು ನೌಕರರಿಗೆ ಮಾಡಿದ ವಂಚನೆಯಾಗಿದೆ. ಈ ಕುರಿತು ಈಗಾಗಲೇ ಮೂರು ಹಂತದ ಹೋರಾಟಗಳನ್ನು ನಡೆಸಲಾಗಿದ್ದು, ಬೇಡಿಕೆ ಈಡೇರಿಸದಿದ್ದಲ್ಲಿ ಈ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರ ಹೋಬಳಿ ಮಾತನಾಡಿ, 2015ರ ಎ.1ರಿಂದ 1000 ಬೀಡಿಗೆ ತುಟ್ಟಿಭತ್ತೆ 12.75 ರೂ. ಬಾಕಿ ಇರಿಸಿಕೊಳ್ಳಲಾಗಿದೆ. ಇದರಿಂದ ಬೀಡಿ ಕಂಪೆನಿಗಳು ಲಾಭ ಮಾಡಿಕೊಂಡರೆ ಬೀಡಿ ಕಾರ್ಮಿಕರಿಗೆ ಸಾವಿರಾರು ರೂ. ನಷ್ಟವಾಗಿದೆ. ಆದುದರಿಂದ 2018ರ ಎ.1ರಿಂದ ಕನಿಷ್ಠ ವೇತನ ಸಾವಿರ ಬೀಡಿಗೆ 210 ರೂ. ಜಾರಿ ಮಾಡಬೇಕು ಹಾಗೂ ಬಾಕಿ ತುಟ್ಟಿಭತ್ತೆಯನ್ನು ಪಾವತಿಸಬೇಕು. ವಾರಕ್ಕೆ ಆರು ದಿನ ಕೆಲಸ ಒದಗಿಸಬೇಕು. ಇಲ್ಲವದಲ್ಲಿ ಕಾರ್ಮಿಕ ಕಾನೂನಿನಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಕೆ.ಲಕ್ಷ್ಮಣ್, ಬೀಡಿ ಲೇಬರ್ ಯೂನಿ ಯನ್ ಅಧ್ಯಕ್ಷೆ ಶಾಂತಾ ನಾಯ್ಕ, ಕಾರ್ಯದರ್ಶಿ ಶಶಿಕಲಾ, ಬೀಡಿ ವರ್ಕರ್ಸ್‌ ಫೆಡರೇಶನ್ ಅಧ್ಯಕ್ಷ ಕೆ.ವಿ.ಭಟ್, ಮುಖಂಡರಾದ ವಿಶ್ವನಾಥ ರೈ, ಶಶಿಧರ ಗೊಲ್ಲ, ಬಲ್ಕೀಸ್ ಕುಂದಾಪುರ, ಕವಿರಾಜ್, ನಳಿನಿ ಮೊದಲಾದವರು ಉಪ ಸ್ಥಿತರಿದ್ದರು. ಇದಕ್ಕೂ ಮುನ್ನ ಸಂತೆಕಟ್ಟೆಯಿಂದ ಡಿಪ್ಪೋವರೆಗೆ ಮೆರವಣಿಗೆ ನಡೆಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News