ತರಗತಿ ಆರಂಭವಾಗಿ 2 ತಿಂಗಳಾದರೂ ಪಠ್ಯ ಆರಂಭವಾಗಿಲ್ಲ !

Update: 2018-11-19 12:15 GMT

ಮಂಗಳೂರು, ನ.19: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಪ್ಯಾರಾ ಮೆಡಿಕಲ್‌ನ ವಿವಿಧ ಕೋರ್ಸ್‌ಗಳಿಗೆ ದ್ವಿತೀಯ ವರ್ಷದ ತರಗತಿ ಆರಂಭಗೊಂಡು ಎರಡು ತಿಂಗಳು ಕಳೆದರೂ ಇನ್ನೂ ಪಠ್ಯ ಚಟುವಟಿಕೆಗಳು ಆರಂಭವಾಗಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಪಠ್ಯ ಚಟುವಟಿಕೆಗಳು ಇನ್ನೂ ಆರಂಭಗೊಳ್ಳದ ಬಗ್ಗೆ ಆತಂಕಗೊಂಡಿರುವ ದ್ವಿತೀಯ ವರ್ಷದ ವಿವಿಧ ಕೋರ್ಸ್‌ಗಳ ವಿದ್ಯಾರ್ಥಿಗಳು ಈ ಬಗ್ಗೆ ಎಸ್‌ಎಫ್‌ಐ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್‌ನ ಡಿಎಂಎಲ್‌ಟಿ, ಡಿಡಿಟಿಟಿ, ಎಂಆರ್‌ಡಿ, ಡಿಡಿಟಿ, ಡಿಒಟಿ, ಆರೋಗ್ಯ ನಿರೀಕ್ಷಕರು ಸೇರಿದಂತೆ ಮೂರೂವರೆ ವರ್ಷಗಳ ಕೋರ್ಸ್‌ಗಳಿಗೆ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳು ಈಗಾಗಲೇ ಪ್ರಥಮ ವರ್ಷದ ತರಗತಿಯನ್ನು ಒಪ್ಪಂದದ ಮೇರೆಗೆ ಪ್ಯಾರಾ ಮೆಡಿಕಲ್ ಸೈನ್ಸ್ ಆಫ್ ಮಂಗಳಾ ಕಾಲೇಜಿನಲ್ಲಿ ಪಡೆದಿದ್ದರು. ಸೆಪ್ಟಂಬರ್ ನಲ್ಲಿ ದ್ವಿತೀಯ ವರ್ಷದ ಕೋರ್ಸ್ ಆರಂಭಗೊಂಡಿತ್ತಾದರೂ ಪೋಸ್ಟಿಂಗ್ ಹೆಸರಿನಲ್ಲಿ ಆಸ್ಪತ್ರೆಯ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಸರಕಾರಿ ರಜಾ ದಿನ ಹಾಗೂ ರವಿವಾರ ಕೂಡಾ ಆಸ್ಪತ್ರೆಯ ಕೆಲಸದಲ್ಲಿ ಭಾಗವಹಿಸುವಂತೆ ಒತ್ತಾಯಿಸಲಾಗುತ್ತಿದೆ. ಅಲ್ಲದೆ ಆಸ್ಪತ್ರೆಯ ಕೆಲ ಸಿಬ್ಬಂದಿಯಿಂದ ಕಿರುಕುಳವನ್ನೂ ಅನುಭವಿಸಬೇಕಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಆಕ್ಷೇಪ.

ಸವಣೂರು, ಸುಬ್ರಹ್ಮಣ್ಯ, ಶಿವಮೊಗ್ಗ, ಬಳ್ಳಾರಿ, ಮಡಿಕೇರಿ, ಕೊಡಗು, ಕೋಲಾರ, ಚಿಕ್ಕಮಗಳೂರು, ಕಾರ್ಕಳ, ಕಿನ್ನಿಗೋಳಿ, ಬೆಳ್ತಂಗಡಿ ಮೊದಲಾದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರದ ಬಿಸಿಎಂ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿಗೆ ಸಂಬಂಧಿಸಿ ಈಗಾಗಲೇ ಇತರ ಖಾಸಗಿ ಕಾಲೇಜುಗಳಲ್ಲಿ ಇಂಟರ್ನಲ್ ಪರೀಕ್ಷೆಗಳು ಕೂಡಾ ನಡೆದಿವೆ. ಆದರೆ ತಮಗೆ ಕನಿಷ್ಠ ಪಾಠವನ್ನೂ ಆರಂಭಿಸಲಾಗಿಲ್ಲ. ಈ ಬಗ್ಗೆ ವೆನ್ಲಾಕ್ ಆಸ್ಪತ್ರೆಯ ಮುಖ್ಯಸ್ಥರನ್ನು ಕೇಳಿದರೆ, ಅವರು ಸಮರ್ಪಕವಾಗಿ ಪ್ರತಿಕ್ರಿಯಿಸುತ್ತಿಲ್ಲ. ಪ್ರಾಕ್ಟಿಕಲ್ ತರಬೇತಿಯನ್ನು ಪಡೆಯುತ್ತಿರುವ ಬಗ್ಗೆ ಹಾಜರಾತಿಯೇ ಇಲ್ಲ. ಪ್ರಥಮ ವರ್ಷದ ಆರಂಭದಲ್ಲಿ ಪೋಷಕರನ್ನು ಕರೆಸಲಾಗಿತ್ತು. ಆ ಬಳಿಕ ಈವರೆಗೂ ಪೋಷಕರ ಸಭೆ ಕರೆದಿಲ್ಲ. ದ್ವಿತೀಯ ವರ್ಷದ ಆರಂಭದಲ್ಲಿ ನೇರವಾಗಿ ನಮಗೆ ವೆನ್ಲಾಕ್ ಆಸ್ಪತ್ರೆಗೆ ಕರೆಸಿಕೊಂಡು ಆಸ್ಪತ್ರೆಯ ಅನ್ಯ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಇತ್ತೀಚೆಗೆ ಎಂಎಲ್‌ಟಿ ಕೋರ್ಸ್‌ನ ವಿದ್ಯಾರ್ಥಿನಿಗೆ ವಾರ್ಡ್‌ನಲ್ಲಿ ಕೆಲಸ ಕೊಡಿಸಿದ್ದಾರೆ. ಮನೋರೋಗ ಚಿಕಿತ್ಸಾ ವಿಭಾಗದಲ್ಲಿ ರೋಗಿಯ ವಾಂತಿ ತೆಗೆಸುವ ಕೆಲಸವನ್ನು ಎಂಎಲ್‌ಟಿ ವಿದ್ಯಾರ್ಥಿನಿಯಿಂದ ಮಾಡಿಸಲಾಗಿದೆ. ಮಾತ್ರವಲ್ಲದೆ ಇದೀಗ ರಾತ್ರಿ ಪಾಳಿಯಲ್ಲೂ ಕೆಲಸ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಭವಿಷ್ಯದ ಕನಸು ಹೊತ್ತು ನಾವು ಹಲವಾರು ನಿರೀಕ್ಷೆಯೊಂದಿಗೆ ಸರಕಾರಿ ಕಾಲೇಜಿನ ಛಾಯಾಚಿತ್ರದಡಿ ಪ್ಯಾರಾ ಮೆಡಿಕಲ್ ಕೋರ್ಸ್ ಮಾಡುವ ಉದ್ದೇಶದಿಂದ ಬಂದಿದ್ದೇವೆ. ನಮಗೆ ನ್ಯಾಯ ದೊರೆಯಬೇಕಿದೆ’’ ಎಂದು ನೊಂದ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

‘‘ನಮಗೆ ಎರಡು ದಿನಗಳ ಹಿಂದೆಯಷ್ಟೆ ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಅರಿವಾಗಿದೆ. ವಿದ್ಯಾರ್ಥಿಗಳು ಪಠ್ಯಕ್ರಮ ಆರಂಭಿಸುವಂತೆ ಮನವಿ ಮಾಡಿಕೊಂಡ ಕಾರಣ ಉಪನ್ಯಾಸಕರ ಬದಲು ಆಸ್ಪತ್ರೆಯ ವೈದ್ಯರಿಂದ ಪಠ್ಯ ನಡೆಸುವುದಾಗಿ ಹೇಳಿದ್ದಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಈ ಹಿನ್ನೆಲೆಯಲ್ಲಿ ನಾವೀಗ ಜಿಲ್ಲಾಧಿಕಾರಿ ಮೂಲಕ ಸಮಸ್ಯೆ ಬಗೆಹರಿಸಲು ಮನವಿ ನೀಡಿದ್ದೇವೆ’’ ಎಂದು ಎಸ್‌ಎಫ್‌ಐನ ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.


ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳು

*ತರಗತಿ ಆರಂಭಿಸಿ ಪಠ್ಯ ಚಟುವಟಿಕೆ ನಡೆಸಲು ಕ್ರಮ ಕೈಗೊಳ್ಳಬೇಕು

* ಪೋಸ್ಟಿಂಗ್ ಹೆಸರಿನಲ್ಲಿ ನಿಯಮ ಮೀರಿ ಆಸ್ಪತ್ರೆಯ ಕೆಲಸಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವುದನ್ನು ನಿಲ್ಲಿಸಬೇಕು

* ವೈದ್ಯರ ಬದಲಾಗಿ ಖಾಯಂ ಉಪನ್ಯಾಸಕರನ್ನು ನೇಮಕ ಮಾಡಬೇಕು

* ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಕ್ಷಣ ತರಗತಿ ಆರಂಭಿಸಬೇಕು

* ಪೋಸ್ಟಿಂಗ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News