ಮನಪಾ ಪ್ರಗತಿ ಪರಿಶೀಲನಾ ಸಭೆಗೆ ಶಾಸಕರ ಕಡೆಗಣನೆ: ಬಿಜೆಪಿ ಆರೋಪ

Update: 2018-11-19 11:56 GMT

ಮಂಗಳೂರು, ನ.19: ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಗೆ ಶಾಸಕರನ್ನು ಆಹ್ವಾನಿಸದೆ ಕಡೆಗಣಿಸಲಾಗುತ್ತಿದೆ ಎಂದು ಪಾಲಿಕೆಯ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಭೆಯನ್ನು ಪ್ರತಿಪಕ್ಷ ಬಹಿಷ್ಕರಿಸಿದೆ ಎಂದು ತಿಳಿಸಿದ್ದಾರೆ.

ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುತ್ತಿದ್ದು, ಈ ಎರಡು ಕ್ಷೇತ್ರಗಳಲ್ಲಿ ಈ ಹಿಂದೆ ಕ್ರಾಂಗ್ರೆಸ್ ಶಾಸಕರಿದ್ದಾಗ ಅವರನ್ನು ಅಭಿವೃದ್ಧಿ ಸಮಿತಿ ಸಭೆಗೆ ಆಹ್ವಾನಿಸಲಾಗುತ್ತಿತ್ತು ಮಾತ್ರವಲ್ಲದೆ ಶಾಸಕರು ಬಾರದೆ ಸಭೆ ಆರಂಭಿಸುತ್ತಿರಲಿಲ್ಲ. ಆದರೆ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಚುನಾಯಿತರಾಗಿ ಬಂದ ಬಳಿಕ ಅವರನ್ನು ಪಾಲಿಕೆಯ ಅಭಿವೃದ್ಧಿ ಸಮಿತಿ ಸಭೆಗೆ ಆಹ್ವಾನಿಸಲಾಗುತ್ತಿಲ್ಲ ಎಂದವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜಕೀಯ ಉದ್ದೇಶದಿಂದ ಶಾಸಕರನ್ನು ಈ ಸಭೆಗೆ ಆಹ್ವಾನಿಸುತ್ತಿಲ್ಲ. ಬಿಜೆಪಿ ಶಾಸಕರನ್ನು ಸಭೆಗೆ ಆಹ್ವಾನಿಸಿದರೆ ಅದರಿಂದ ಬಿಜೆಪಿಗೆ ಲಾಭವಾಗಬಹುದೆಂಬ ಲೆಕ್ಕಾಚಾರ ಪಾಲಿಕೆಯ ಆಡಳಿತ ನಡೆಸುತ್ತಿರುವ ಕಾಂಗ್ರೆಸಿಗರಿಗೆ ಇದ್ದಂತಿದೆ ಎಂದು ಪ್ರೇಮಾನಂದ ಶೆಟ್ಟಿ ದೂರಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪಾಲಿಕೆಗೆ ವಿಶೇಷ ಅನುದಾನ ಬರಲು ಆರಂಭವಾದ ಬಳಿಕ ಪಾಲಿಕೆಯಲ್ಲಿ ಅಭಿವೃದ್ಧಿ ಸಮಿತಿ ಸಭೆಗಳನ್ನು ನಡೆಸುವ ಸಂಪ್ರದಾಯ ಆರಂಭವಾಗಿತ್ತು. ಕಳೆದ ಬಾರಿ ಕಾಂಗ್ರೆಸ್ ಶಾಸಕರಿದ್ದಾಗ ಅವರ ಲಭ್ಯತೆಯನ್ನು ಆಧರಿಸಿ ಸಭೆಗೆ ದಿನಾಂಕಗಳನ್ನು ನಿಗದಿಪಡಿಸಲಾಗುತ್ತಿತ್ತು. ಆದರೆ ಬಿಜೆಪಿ ಶಾಸಕರು ಆಯ್ಕೆಯಾಗಿ ಬಂದು ಬಳಿಕ ಸಭೆಗೆ ಶಾಸಕರನ್ನು ಆಹ್ವಾನಿಸುವುದನ್ನೇ ಕೈಬಿಡಲಾಗಿದೆ. ಕಳೆದ ಅಕ್ಟೋಬರ್ ತಿಂಗಳ ಸಭೆಯಲ್ಲಿ ಈ ಬಗ್ಗೆ ತಾವು ಪ್ರಸ್ತಾಪಿಸಿದಾಗ ಮುಂದಿನ ಸಭೆಗೆ ಆಹ್ವಾನಿಸಲಾಗುವುದು ಎಂದು ಮೇಯರ್ ಹೇಳಿದ್ದರು. ಆದರೆ ಇಂದಿನ ಸಭೆಗೂ ಶಾಸಕರನ್ನು ಆಹ್ವಾನಿಸಿಲ್ಲ. ಆದ್ದರಿಂದ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ವಿವರಿಸಿದರು.

14ನೇ ಹಣಕಾಸು ಆಯೋಗದ ಅನುದಾನ ಮತ್ತು ಎಸ್‌ಎ್ಸಿ ಅನುದಾನಗಳ ಯೋಜನೆಯ ಮಂಜೂರಾತಿ ಸಂದರ್ಭದಲ್ಲಿ ಶಾಸಕರನ್ನು ಸೇರಿಸಿಕೊಂಡು ಸಭೆ ನಡೆಸಿದರೆ ಹೆಚ್ಚು ಪರಿಣಾಮಕಾರಿ ಆಗುತ್ತದೆ. ಅಲ್ಲದೆ ಮುಂದೆ ಹೆಚ್ಚುವರಿ ಅನುದಾನ ತರಿಸಲು ಅನುಕೂಲವಾಗುತ್ತದೆ ಎಂದು ಪ್ರತಿಪಕ್ಷ ನಾಯಕರು ಅಭಿಪ್ರಾಯ ಪಟ್ಟರು.

ರಾಜ್ಯದಲ್ಲಿ ನೂತನ ಸರಕಾರ ಬಂದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಗಳು ವಿರಳವಾಗಿವೆ. ಈ ಹಿಂದೆ ಕೃಷ್ಣ ಜೆ. ಪಾಲೆಮಾರ್ ಉಸ್ತುವಾರಿ ಸಚಿವರಾಗಿದ್ದಾಗ 15 ದಿನಗಳಿಗೊಮ್ಮೆ ಇಂತಹ ಸಭೆ ನಡೆಯುತ್ತಿದ್ದವು. ಪ್ರಸ್ತುತ ಯು.ಟಿ. ಖಾದರ್ ಉಸ್ತುವಾರಿ ಸಚಿವರಾದ ಬಳಿಕ ಇದುವರೆಗೆ ಒಂದು ಸಭೆ ಮಾತ್ರ ನಡೆದಿದೆ. ಕನಿಷ್ಠ ತಿಂಗಳಿಗೆ ಎರಡು ಸಭೆಗಳನ್ನಾದರೂ ನಡೆಸ ಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ಮತ್ತು ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News