ವೇತನ ನೀಡದ ಸೆಕ್ಯುರಿಟಿ ಸಂಸ್ಥೆಯ ಕಚೇರಿಗೆ ಗುತ್ತಿಗೆ ಕಾರ್ಮಿಕರಿಂದ ಮುತ್ತಿಗೆ

Update: 2018-11-19 15:42 GMT

ಮಂಗಳೂರು, ನ.19: ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರ ವೇತನ ನೀಡದೆ ಸತಾಯಿಸುತ್ತಿರುವ ಹಾಗೂ 10 ಮಂದಿ ಕಾರ್ಮಿಕರನ್ನು ವಿನಾಕಾರಣ ವಜಾ ಮಾಡಿದ ಸಾಯಿ ಸೆಕ್ಯುರಿಟೀಸ್ ಸಂಸ್ಥೆಯ ಬೇಜವಾಬ್ದಾರಿತನ ಖಂಡಿಸಿ ಸೋಮವಾರ ನಗರದಲ್ಲಿರುವ ಸಂಸ್ಥೆಯ ಕಚೇರಿಗೆ ಸಿಐಟಿಯು ನೇತೃತ್ವದಲ್ಲಿ ಮುತ್ತಿಗೆ ಹಾಕಲಾಯಿತು.

‘ಕಾರ್ಮಿಕರಿಗೆ ಸಂಬಳ ನೀಡದ ವಂಚಕರಿಗೆ ಧಿಕ್ಕಾರ’, ‘ದೇವರ ಹೆಸರನ್ನಿಟ್ಟು ಕಾರ್ಮಿಕರಿಗೆ ವಂಚಿಸುವ ಸಾಯಿ ಸೆಕ್ಯುರಿಟಿಗೆ ಧಿಕ್ಕಾರ’ ಎಂಬಿತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು ಹಾಗೂ ಸಾಯಿ ಸೆಕ್ಯುರಿಟಿ ಸಂಸ್ಥೆಯ ಮಾಲಕರು ಒಟ್ಟು ಸೇರಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡುವ ದುರುದ್ದೇಶದಿಂದಲೇ ಅ.13ರಂದು ಸಭೆ ನಿಗದಿ ಮಾಡಿದ್ದರೂ ಸಂಜೆಯವರೆಗೆ ಸಭೆ ನಡೆಸದೆ ಕಾರ್ಮಿಕರನ್ನು ಸತಾಯಿಸಲಾಗಿದೆ ಎಂದರು.

ಆಕ್ರೋಶಗೊಂಡ ಕಾರ್ಮಿಕರು ಇದನ್ನು ಪ್ರಶ್ನಿಸಿರುವ ಏಕೈಕ ಕಾರಣದಿಂದ 10 ಮಂದಿ ಕಾರ್ಮಿಕರನ್ನು ವಿನಾಕಾರಣ ವಜಾ ಮಾಡಿದ್ದು ಮಾತ್ರವಲ್ಲದೆ, ಆದಿನ ಕಾರ್ಮಿಕರು ಕೆಲಸ ಮಾಡಿದ್ದರೂ ಉದ್ದೇಶಪೂರ್ವಕವಾಗಿಯೇ ಸಂಬಳವನ್ನು ಕಟ್ ಮಾಡಿದ್ದಾರೆ. ತಿಂಗಳ ಪ್ರಾರಂಭದಲ್ಲೇ ನೀಡುವ ಸಂಬಳವನ್ನು 16 ತಾರೀಕಿನವರೆಗೆ ನೀಡದೆ ಸತಾಯಿಸಿದ್ದಾರೆ ಎಂದು ಆರೋಪಿಸಿದರು.

ಕಾರ್ಮಿಕರನ್ನು ಗುಲಾಮರಂತೆ ದುಡಿಸಿಕೊಳ್ಳುವ ಸಾಯಿ ಸೆಕ್ಯುರಿಟಿ ಸಂಸ್ಥೆಯ ಹಾಗೂ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹಲವಾರು ಅಕ್ರಮಗಳನ್ನು ಮಾಡಿರುವ ಜಿಲ್ಲಾ ಅಧೀಕ್ಷಕರ ವಿರುದ್ಧ ಕಾರ್ಮಿಕರು ಸಂಘಟಿತ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

ಕಾರ್ಮಿಕರ ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ, ರಸ್ತೆತಡೆ ಮುಂತಾದ ತೀವ್ರ ರೀತಿಯ ಹೋರಾಟಗಳನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು. 

ಬಳಿಕ ಬಂದರು ಠಾಣೆಯ ಪೋಲೀಸ್ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ಮಾತುಕತೆ ನಡೆಸಿ, ಸಮಸ್ಯೆಯನ್ನು ಪರಿಹರಿಸಲು ಮುಂದಾದರು. ಹೋರಾಟದ ನೇತೃತ್ವವನ್ನು ಸಿಐಟಿಯು ನಾಯಕರಾದ ಮುಹಮ್ಮದ್ ಅನ್ಸಾರ್, ಕಾರ್ಮಿಕ ಮುಖಂಡರಾದ ಹೇಮಾವತಿ, ಶಾಂತ, ನಾಗರಾಜ್, ಲೀಲಾ, ಗೀತಾ, ದೀಪಕ್, ಲತೀಫ್, ಇಮದಾದ್, ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮುಂತಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News