ದ.ಕ, ಉಡುಪಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ನಡೆದಿಲ್ಲ: ಎಂ.ಎನ್ ರಾಜೇಂದ್ರ ಕುಮಾರ್

Update: 2018-11-19 16:02 GMT

ಮೂಡುಬಿದಿರೆ, ನ. 19: ''ದ.ಕ., ಉಡುಪಿ ಜಿಲ್ಲೆಯಲ್ಲಿ ರೈತರ ಸಾಮರ್ಥ್ಯಕ್ಕನುಗುಣವಾಗಿ ಸಹಕಾರಿ ಬ್ಯಾಂಕ್‍ಗಳು ಅಲ್ಪಾವಧಿ, ದೀರ್ಘಾವಧಿ ಬೆಳೆ ಸಾಲಗಳನ್ನು ನೀಡಿ ಅವರ ಅಗತ್ಯಗಳಿಗೆ ಸ್ಪಂದಿಸಿ ಆರ್ಥಿಕ ಸ್ವಾವಲಂಬನೆ ನೀಡಿರುವುದರಿಂದ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ನಡೆದಿಲ್ಲ'' ಎಂದು ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.

ಬೆಳುವಾಯಿಯ ಕೆಸರ್‍ಗದ್ದೆ ಸಹಕಾರಿ ಸಂಘದಲ್ಲಿ ಸೋಮವಾರ ನಡೆದ 65ನೇ ಅಖಿಲ ಭಾರತ ಸಹಕಾರ ಸಪ್ತಾಹವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ರೈತರು ಸರಕಾರದ ಸವಲತ್ತುಗಳನ್ನು ಪಡೆಯುವ ಚೆಕ್, ಇನ್ನಿತರ ಹಣಕಾಸು ವ್ಯವಹಾರವನ್ನು ಸರಕಾರ ಸ್ಥಳೀಯ ಸಹಕಾರಿ ಬ್ಯಾಂಕ್‍ಗಳ ಮೂಲಕ ನಡೆಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ಹಣಕ್ಕೆ ಎಸ್‍ಸಿಡಿಸಿಸಿ ಬ್ಯಾಂಕ್ ಭದ್ರತೆ ನೀಡಲು ಸಿದ್ಧವಿದೆ. ನೀರವ್ ಮೋದಿ ಸೇರಿದಂತೆ ಅನೇಕರು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಹಣ ವಂಚಿಸಿದನ್ನು ನೋಡಿದರೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಆದರೆ ಜಿಲ್ಲೆಯ ಸಹಕಾರಿ ಬ್ಯಾಂಕ್‍ಗಳು ಆರ್ಥಿಕವಾಗಿ ಬಲಿಷ್ಟವಾಗಿವೆ ಎಂದರು.

''ಕಾಯಕ' ಯೋಜನೆಯಡಿ ನವೋದಯ ಸ್ವಸಹಾಯ ಮಹಿಳಾ ಗುಂಪಿಗೆ ಶೂನ್ಯ ಬಡ್ಡಿದರದಲ್ಲಿ ಗರಿಷ್ಟ ರೂ 5 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಹಾಗೂ ಮಹಿಳಾ ಮತ್ತು ಪುರುಷ ಸ್ವಸಹಾಯ ಗುಂಪುಗಳು ಜಂಟಿಯಾಗಿ ಪಡೆಯುವ ಸಾಲಕ್ಕೆ ಶೇಖಡಾ ರೂ 4 ಬಡ್ಡಿ ದರ ವಿಧಿಸಲಾಗುವುದು' ಎಂದರು.

ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್‍ಡಿಎಫ್‍ಸಿ ಬ್ಯಾಂಕ್‍ನವರು ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವುದಾಗಿ ನಂಬಿಸಿ ಜನರಿಗೆ ಹಣ ಕೊಡುತ್ತಿದ್ದಾರೆ. ಸಾಲ ಮರುಪಾವತಿಸುವಾಗ ನಿಮಗೆ ದುಪ್ಪಟ್ಟು ಬಡ್ಡಿ ಹೇರುತ್ತಾರೆ. ಅವರು ನಿಮ್ಮ ಊರಿಗೆ ಬಂದರೆ ಓಡಿಸಿ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಸದಸ್ಯರಾದ ನೇಮಿರಾಜ ಹೆಗಡೆ, ಲಕ್ಷ್ಮೀನಾರಾಯಣ ಉಪಾಧ್ಯಾಯ, ಗಿರಿಜ ಎಸ್.ಭಟ್, ಫೀರ್‍ಖಾನ್ ಸಾಹೇಬ್, ಇಗ್ನೇಶಿಯಸ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. 

ಎಸ್‍ಸಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರಾಗಿ 25ನೇ ವರ್ಷದ ಸೇವೆಯಲ್ಲಿರುವ ಹಿನ್ನೆಲೆಯಲ್ಲಿ ಎಂ.ಎನ್ ರಾಜೇಂದ್ರ ಕುಮಾರ್‍ಗೆ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಉಮಾನಾಥ ಕೋಟ್ಯಾನ್‍ಗೆ ಸನ್ಮಾನಿಸಲಾಯಿತು.

ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿದರು. ದ.ಕ ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷ ಹರೀಶ್ ಆಚಾರ್ಯ, ನಿರ್ದೇಶಕ ಬಾಹುಬಲಿ ಪ್ರಸಾದ್, ಬೆಳುವಾಯಿ ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ ಆಚಾರ್ಯ, ಎಂಸಿಎಸ್ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‍ಎಂ., ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ ಸಲೀಂ, ಮೂಡುಬಿದಿರೆ ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕಿ ಬಿಂದು ನಾಯರ್ ಮತ್ತಿತರರು ಉಪಸ್ಥಿತರಿದ್ದರು. ಬ್ಯಾಂಕ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ್ ರಾವ್ ಸ್ವಾಗತಿಸಿದು. ನವೀನ್ ಅಂಬೂರಿ ನಿರೂಪಿಸಿದರು. ನಯನ ಆರ್.ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಸಂಜಯ ಅತಿಕಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News