ಬಿ.ಸಿ.ರೋಡ್‍: ಮರಳು ಸಮಸ್ಯೆಯನ್ನು ಶಾಶ್ವಾತವಾಗಿ ಪರಿಹರಿಸುವಂತೆ ಒತ್ತಾಯಿಸಿ ಧರಣಿ

Update: 2018-11-19 16:29 GMT

ಬಂಟ್ವಾಳ, ನ. 19: ದ.ಕ. ಜಿಲ್ಲೆಯಲ್ಲಿ ಜನ ಸಾಮಾನ್ಯರನ್ನು ಕಾಡುತ್ತಿರುವ ಮರಳು ಸಮಸ್ಯೆಯನ್ನು ಶಾಶ್ವಾತವಾಗಿ ಪರಿಹರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ವತಿಯಿಂದ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಸೋಮವಾರ ಧರಣಿ ನಡೆಯಿತು.

ಕಳೆದ ಹಲವು ತಿಂಗಳಿನಿಂದ ಕರಾವಳಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ತೀವ್ರವಾಗಿ ಉಲ್ಭಣಗೊಂಡಿದೆ. ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ನದಿಗಳಲ್ಲಿ ದೊರೆಯುತ್ತಿದ್ದರೂ ಸರಕಾರದ ಧೋರಣೆಯಿಂದಾಗಿ ಮರಳಿನ ಕೃತಕ ಅಭಾವ ಉಂಟಾಗಿದೆ. ಮರಳು ಸಮಸ್ಯೆಯಿಂದಗಿ ನಿರ್ಮಾಣ ಕ್ಷೇತ್ರವು ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಧರಣಿನಿರತರು ಆರೋಪಿಸಿದರು.

ಸಿಐಟಿಯು ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ಮೂರು ವರ್ಷಗಳಿಂದ ಕೃತಕ ಮರಳು ಅಭಾವ ಸೃಷ್ಠಿಯಾಗಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿ ಗಳ ಶಾಮೀಲಾತಿಯಿಂದ ಈ ಸಮಸ್ಯೆ ಸೃಷ್ಠಿಯಾಗಿದ್ದು, ಮೂರು ಸಾವಿರ ರೂಪಾಯಿಗೆ ಸಿಗುತಿದ್ದ ಮರಳು ಈಗ ಹದಿನೆಂಟು ಸಾವಿರಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ರಾತ್ರಿ ವೇಳೆ ಅಕ್ರಮ ಮರಳು ಸಾಗಾಟ ರದ್ದುಗೊಳಿಸಬೇಕು. ಮರಳು ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಫೆಡರೇಶನ್ ಅಧ್ಯಕ್ಷ ಉದಯಕುಮಾರ್ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷ ಜಯಂತ ನಾಯಕ, ಸುರೇಂದ್ರ, ಗಣೇಶ, ಗಣೇಶ ಕಾಮತ್, ಲಿಯಾಕತ್ ಆಲಿಕಾ, ಸತೀಶ, ಹನೀಫ್, ಉಸ್ಮಾನ್, ಅನ್ಸಾರ್, ಹಝೀಝ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News