ಸಹಕಾರಿ ಬ್ಯಾಂಕ್‌ಗಳಿಂದ ಸ್ಪರ್ಧಾತ್ಮಕ ಸೇವೆ: ಡಾ.ರಾಜೇಂದ್ರ ಕುಮಾರ್

Update: 2018-11-20 08:19 GMT

ಮಂಗಳೂರು, ನ.20: ಹಲವು ಬ್ಯಾಂಕ್‌ಗಳ ಹುಟ್ಟೂರಾದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೌಶಲ್ಯ ಹಾಗೂ ತಾಂತ್ರಿಕತೆಯಿಂದಾಗಿ ಸಹಕಾರಿ ಬ್ಯಾಂಕ್‌ಗಳು ವಾಣಿಜ್ಯ ಬ್ಯಾಂಕ್‌ಗಳೆದುರು ಸ್ಪರ್ಧಾತ್ಮಕ ಸೇವೆಯನ್ನು ಒದಗಿಸುತ್ತಿವೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಿಸಿದ್ದಾರೆ.

ಎಸ್‌ಸಿಡಿಸಿಸಿ ಸಭಾಂಗಣದಲ್ಲಿ 65ನೆ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಇಂದು ಆಯೋಜಿಸಲಾಗಿದ್ದ ಸಹಕಾರಿ ನಡಿಗೆ ಹಾಗೂ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯ ಬ್ಯಾಂಕ್‌ಗಳಿಗಿಂತ ಮಿಗಿಲಾಗಿ ಸಹಕಾರಿ ಬ್ಯಾಂಕ್‌ಗಳು ಸೇವೆ ನೀಡುತ್ತಿದ್ದು, ಇದು ಜಿಲ್ಲೆಯ ವೈಶಿಷ್ಟ. ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ತಾಂತ್ರಿಕತೆಯಲ್ಲೂ ಸಹಕಾರಿ ಬ್ಯಾಂಕ್ ಮುಂಚೂಣಿಯಲ್ಲಿದೆ. ತಾಂತ್ರಿಕತೆಯಲ್ಲಿ ಸಹಕಾರಿ ಬ್ಯಾಂಕ್‌ಗಳೂ ಇನ್ನೂ ಹೆಚ್ಚಿನ ಅನ್ವೇಷಣೆಯನ್ನು ಮಾಡಬೇಕಾಗಿದೆ. ಸಹಕಾರಿ ಕ್ಷೇತ್ರದಲ್ಲಿರುವ ಠೇವಣಿ ಗ್ರಾಹಕರದ್ದು. ಆದರೆ ವಾಣಿಜ್ಯ ಬ್ಯಾಂಕುಗಳು ವಿವಿಧ ಯೋಜನೆಗಳ ಹಣದಿಂದ ಸಾಲ ನೀಡುವ ಮೂಲಕ ಪೈಪೋಟಿ ನೀಡುತ್ತಿವೆ. ಒಂದು ಸೊಸೈಟಿಯಲ್ಲಿ ಸಾಲ ನೀಡಲು ಹಣದ ಕೊರತೆಯಾದರೆ ಇನ್ನೊಂದು ಸೊಸೈಟಿಯಿಂದ ಹಣ ಒದಗಿಸಿ ಸಾಲ ನೀಡಲಾಗುತ್ತದೆ. ಗ್ರಾಹಕರಿಗೆ ಸಾಲ ನೀಡುವಲ್ಲಿ ದುಡ್ಡಿನ ಕೊರತೆ ಸಮಸ್ಯೆ ಎಂದಿಗೂ ಅಡ್ಡಿಯಾಗಬಾರದು ಎಂದು ಅವರು ಹೇಳಿದರು. ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವದ್ದಾಗಿದ್ದು, ರಾಜಕೀಯದ ಹೊರತಾಗಿ ಸಹಕಾರಿ ಕ್ಷೇತ್ರವನ್ನು ಬೆಳೆಸಬೇಕಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ, ಕ್ಯಾಂಪ್ಕೋ ನಿರ್ದೇಶಕ ಶಂಕರನಾರಾಯಣ ಖಂಡಿಗೆ ಮಾತನಾಡಿದರು.

ಚೀರುಂಭ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷೆ ಶಾಂತಾ, ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ.ಸಲೀಂ, ಎಸ್‌ಸಿಡಿಸಿಸಿ ಬ್ಯಾಂಕ್‌ನ ವಿನಯಕುಮಾರ್ ಸೂರಿಂಜೆ, ದೇವಿಪ್ರಸಾದ್ ಶೆಟ್ಟಿ, ಸದಾಶಿವ ಉಳ್ಳಾಲ್, ರವೀಂದ್ರ ಬೋಳಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಹಕಾರಿ ಸಪ್ತಾಹ ಆಚರಣಾ ಸಮಿತಿಯ ಅಧ್ಯಕ್ಷ ಕೆ.ಜೈರಾಜ್ ಬಿ. ರೈ ಸ್ವಾಗತಿಸಿದರು.

ಸಮಾವೇಶಕ್ಕೆ ಮೊದಲು ಬಂಟ್ಸ್ ಹಾಸ್ಟೆಲ್‌ನಿಂದ ಎಸ್‌ಸಿಡಿಸಿಸಿ ಬ್ಯಾಂಕ್‌ವರೆಗೆ ಸಹಕಾರಿ ನಡಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News