ನೀವು ಸಿಐಸಿಯನ್ನು ಬಲಗೊಳಿಸಿದರೆ ಆರ್‌ಟಿಐ ಬಲಗೊಳ್ಳುತ್ತದೆ

Update: 2018-11-20 11:00 GMT

ಬೃಹತ್ ಬ್ಯಾಂಕ್ ಸಾಲಗಳ ಉದ್ದೇಶಪೂರ್ವಕ ಸುಸ್ತಿದಾರರ ಹೆಸರನ್ನು ಬಹಿರಂಗಗೊಳಿಸದ್ದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಪ್ರಧಾನಿ ಕಚೇರಿ ಮತ್ತು ಆರ್‌ಬಿಐ ಅನ್ನು ತರಾಟೆಗೆತ್ತಿಕೊಂಡಿದ್ದ ಕೇಂದ್ರೀಯ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯುಲು ಅವರು ಡಿಸೆಂಬರ್‌ನಲ್ಲಿ ತಾನು ಮತ್ತು ಇತರ ಮೂವರು ಕೇಂದ್ರೀಯ ಮಾಹಿತಿ ಆಯುಕ್ತರು ನಿವೃತ್ತಿಗೊಂಡಾಗ ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ)ವು ದುರ್ಬಲವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ ಆರ್‌ಟಿಐ ಮೇಲ್ಮನವಿಗಳ ವಿಚಾರಣೆಯ ಕೊನೆಯ ದಿನ ಆಚಾರ್ಯುಲು ಅವರು ಈ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ಸಾರಾಂಶ ಇಲ್ಲಿದೆ.......

► ಆರ್‌ಬಿಐ ಮತ್ತು ಪ್ರಧಾನಿ ಕಚೇರಿಗೆ ಸಂಬಂಧಿಸಿದ ಆರ್‌ಟಿಐ ಮೇಲ್ಮನವಿಗಳ ಪ್ರಾಥಮಿಕ ಹೊಣೆಗಾರಿಕೆಯನ್ನು ಇತರ ಆಯುಕ್ತರಿಗೆ ನೀಡಲಾಗಿದೆ ಎಂಬ ದೂರುಗಳಿವೆ. ಈ ಪ್ರಕರಣವನ್ನು ನೀವೇಕೆ ಕೈಗೆ ಎತ್ತಿಕೊಂಡಿದ್ದೀರಿ?

ಯಾವುದೇ ನಿರ್ದಿಷ್ಟ ಪ್ರಕರಣಕ್ಕಾಗಿ ನಾನು ಕೇಳುವುದಿಲ್ಲ. ನನಗೆ ಅಂತಹ ಆಯ್ಕೆಯಿಲ್ಲ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವನ್ನು ನನಗೆ ಹಂಚಿಕೆ ಮಾಡಲಾಗಿದೆ ಮತ್ತು ಈ ಆರ್‌ಟಿಐ ಅರ್ಜಿ ಈ ಸಚಿವಾಲಯದ ಕುರಿತು ಕೆಲವು ಪ್ರಶ್ನೆಗಳನ್ನು ಒಳಗೊಂಡಿರುವದರಿಂದ ಅದು ನನ್ನ ಬಳಿಗೆ ಬಂದಿದೆ. ಮೊದಲ 2-3 ಪ್ರಶ್ನೆಗಳು ಕಾರ್ಮಿಕ ಸಚಿವಾಲಯಕ್ಕೆ ಸಂಬಂಧಿಸಿದ್ದು,ಇತರ ಪ್ರಶ್ನೆಗಳು ಆರ್‌ಬಿಐ ಕುರಿತಾಗಿವೆ. ಇನ್ನೊಂದು ಸರಕಾರಿ ಸಂಸ್ಥೆಯ ಬಳಿ ಮಾಹಿತಿಯಿದೆ ಮತ್ತು ಅದನ್ನು ಒದಗಿಸುತ್ತಿಲ್ಲ ಎಂದು ನನಗೆ ಗೊತ್ತಾದಾಗ ಅದನ್ನು ಪರಿಶೀಲಿಸುವುದು ನನ್ನ ಕರ್ತವ್ಯವಾಗಿದೆ. ವಾಸ್ತವದಲ್ಲಿ ಕಾನೂನು ಕೂಡ ಇದನ್ನೇ ಹೇಳುತ್ತದೆ.

► ನೀವು ಆರ್‌ಬಿಐ ಗವರ್ನರ್‌ರನ್ನೇ ಏಕೆ ಹೊಣೆಗಾರರನ್ನಾಗಿ ಮಾಡಿದ್ದೀರಿ?

ಈ ಹಿಂದೆಯೂ ಇಂತಹುದೇ ಆರ್‌ಟಿಐ ಅರ್ಜಿಯೊಂದು ಸಲ್ಲಿಕೆಯಾಗಿತ್ತು ಮತ್ತು ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಸಿಐಸಿ ಆದೇಶಿಸಿತ್ತು. ಆರ್‌ಬಿಐ ಇದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು. ‘‘ಉದ್ದೇಶಪೂರ್ವಕ ಸುಸ್ತಿದಾರರರ ಹೆಸರುಗಳನ್ನು ಬಹಿರಂಗಗೊಳಿಸುವುದಕ್ಕೆ ನಿಮ್ಮ ಎಲ್ಲ ಆಕ್ಷೇಪಗಳು ಸರಿಯಲ್ಲ ಮತ್ತು ಕಾನೂನುಬದ್ಧವಲ್ಲ. ಹೀಗಾಗಿ ಮಾಹಿತಿಯನ್ನು ಒದಗಿಸಿ’’ ಎಂದು ಸರ್ವೋಚ್ಚ ನ್ಯಾಯಾಲಯವು ಅದಕ್ಕೆ ಸ್ಪಷ್ಟಪಡಿಸಿತ್ತು. ಸರ್ವೋಚ್ಚ ನ್ಯಾಯಾಲಯದ 2015ರ ಈ ಆದೇಶವನ್ನು ಈ ಎಲ್ಲ ಸಂಸ್ಥೆಗಳು ಅನುಷ್ಠಾನಗೊಳಿಸಬೇಕಿತ್ತು.

ಆಗ ಇಂತಹುದೇ ಪ್ರಶ್ನೆಯೊಂದು ನನ್ನೆದುರಿಗೆ ಬಂದಿತ್ತು. ನಾನು ಆರ್‌ಬಿಐಗೆ ನೋಟಿಸ್ ಹೊರಡಿಸಿದ್ದೆ. ಆಗಲೂ ಅದು ಸರ್ವೋಚ್ಚ ನ್ಯಾಯಾಲಯವು ಅದಾಗಲೇ ತಿರಸ್ಕರಿಸಿದ್ದ ಆಕ್ಷೇಪಗಳನ್ನೇ ಸಲ್ಲಿಸಿತ್ತು. ನಾನು ಅದರ ವೆಬ್‌ಸೈಟ್‌ನ್ನು ಪರಿಶೀಲಿಸಿದಾಗ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ ಎಂಬ ಆರ್‌ಬಿಐ ಟಿಪ್ಪಣಿಯೊಡನೆ ನೂರಕ್ಕೂ ಅಧಿಕ ಪಟ್ಟಿಗಳು ಅದರಲ್ಲಿದ್ದವು. ಅರ್‌ಬಿಐ ತಾನು ಮಾಹಿತಿಗಳನ್ನು ಒದಗಿಸುವುದಿಲ್ಲ ಎಂದು ಘೋಷಿಸಿದ್ದ ಅಂಶಗಳಲ್ಲಿ ಬಹಿರಂಗಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ್ದ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯೂ ಇತ್ತು.

ನೀವೇ ಹೇಳಿ,ಮಾಮೂಲಿ ಸಾರ್ವಜನಿಕ ಮಾಹಿತಿ ಅಧಿಕಾರಿ(ಪಿಐಒ) ಇಷ್ಟೊಂದು ದೊಡ್ಡ ಕೆಲಸ ಮಾಡಲು ಸಾಧ್ಯವೇ? ಇಂತಹ ಪಟ್ಟಿಯನ್ನು ಬಹಿರಂಗಗೊಳಿಸಲು ಅವರು ಧೈರ್ಯ ಮಾಡುವರೇ? ಹಾಗಿದ್ದರೆ ಅದನ್ನು ಯಾರು ಮಾಡುತ್ತಾರೆ? ಆರ್‌ಬಿಐನ ಅತ್ಯುನ್ನತ ಅಧಿಕಾರಿ ಅದನ್ನು ಮಾಡುತ್ತಾರೆ. ಹೀಗಾಗಿ ಸಾಮಾನ್ಯ ಸಣ್ಣ ಅಧಿಕಾರಿಗಳನ್ನು ನಾನು ದಂಡಿಸಬೇಕೆಂದು ನೀವು ಭಾವಿಸಿದ್ದೀರಾ? ಇನ್ನೋರ್ವ ಅಧಿಕಾರಿ ಮಾಹಿತಿಯನ್ನು ಹೊಂದಿದ್ದಾನೆ ಮತ್ತು ಅದನ್ನು ಒದಗಿಸುತ್ತಿಲ್ಲ ಎಂದಾದರೆ ಆತನನ್ನು ಪರಿಗಣಿತ ಪಿಐಒ ಎಂದು ಗಣನೆಗೆ ತೆಗೆದುಕೊಳ್ಳಲು ಆರ್‌ಟಿಐ ಕಾಯ್ದೆಯಡಿ ಅವಕಾಶವಿದೆ. ಈಗ ಇಲ್ಲಿ ಮಾಹಿತಿಯನ್ನು ಹೊಂದಿದ್ದ ಇನ್ನೋರ್ವ ಅಧಿಕಾರಿ ಯಾರು? ಅದು ಆರ್‌ಬಿಐ ಗವರ್ನರ್. ನೀವು ಸರ್ವೋಚ್ಚ ನ್ಯಾಯಾಲಯ,ಆರ್‌ಟಿಐ ಮತ್ತು ಸಿಐಸಿಯನ್ನು ಏಕೆ ಉಲ್ಲಂಘಿಸುತ್ತಿದ್ದೀರಿ ಎನ್ನುವುದನ್ನು ವಿವರಿಸುವಂತೆ ನಾನು ಅವರನ್ನು ಕೇಳಿದರೆ ಅದು ಅಕ್ರಮವಾಗುವುದಿಲ್ಲ.

► ಈಗ ಈ ಪ್ರಕರಣದ ಮುಂದಿನ ವಿಚಾರಣೆಗೆ ಮೊದಲೇ ನೀವು ನಿವೃತ್ತರಾಗುತ್ತಿದ್ದೀರಿ?

ಡಿ.1ರಂದು ನಾವು ನಾಲ್ಕು ಆಯುಕ್ತರು ನಿವೃತ್ತಿಯಾಗುತ್ತಿದ್ದೇವೆ ಮತ್ತು ಆಯೋಗದಲ್ಲಿ ಕೇವಲ ಮೂವರು ಕೇಂದ್ರೀಯ ಮಾಹಿತಿ ಆಯುಕ್ತರು ಉಳಿದುಕೊಳ್ಳುತ್ತಾರೆ. ಬೆಳೆಯುತ್ತಿರುವ ಪ್ರಕರಣಗಳನ್ನು ನಿರ್ವಹಿಸಲು ಅವರಿಗೆ ತುಂಬ ಕಷ್ಟವಾಗಲಿದೆ ಮತ್ತು ಮುಖ್ಯ ಆಯುಕ್ತರು ಇಲ್ಲದಿರುವುದೂ ದೊಡ್ಡ ಸಮಸ್ಯೆಯಾಗಲಿದೆ. ಏಳು ಆಯಕ್ತರು ನಿರ್ವಹಿಸುತ್ತಿದ್ದ ವಿಷಯಗಳನ್ನು ಯಾರೂ ನಿರ್ವಹಿಸುವುದಿಲ್ಲ. ಮುಖ್ಯ ಆಯುಕ್ತರು ನಿವೃತ್ತರಾದರೆ ರಾಷ್ಟ್ರಪತಿಗಳ ಕಚೇರಿ,ಪ್ರಧಾನಿ ಕಚೇರಿ ಮತ್ತು ಸರ್ವೋಚ್ಚ ನ್ಯಾಯಾಲಯದಂತಹ ಪ್ರಮುಖ ವಿಷಯಗಳ ವಿಚಾರಣೆ ನಡೆಯುವುದಿಲ್ಲ. ನೀವು ಸಿಐಸಿಯನ್ನು ಬಲಗೊಳಿಸಿದರೆ ಮಾತ್ರ ಆರ್‌ಟಿಐ ಬಲಗೊಳ್ಳುತ್ತದೆ. ಮ್ಯಾನೇಜ್‌ಮೆಂಟ್,ವಿಜ್ಞಾನ ಮತ್ತು ತಂತ್ರಜ್ಞಾನ,ಮಾಧ್ಯಮ,ಸಾಮಾಜಿಕ ಸೇವೆ ಮತ್ತು ಆಡಳಿತದಂತಹ ವಿವಿಧ ಕ್ಷೇತ್ರಗಳಲ್ಲಿಯ ಗಣ್ಯ ವ್ಯಕ್ತಿಗಳನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸುವಂತೆ ಆರ್‌ಟಿಐ ಕಾಯ್ದೆಯು ಹೇಳುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಶೇ.90 ರಷ್ಟು ಮಾಹಿತಿ ಆಯುಕ್ತರು ಮಾಜಿ ಸರಕಾರಿ ಅಧಿಕಾರಿಗಳೇ ಆಗಿದ್ದಾರೆ. ಸದ್ಯಕ್ಕೆ ಸಿಐಸಿಯಲ್ಲಿ ನಾನೊಬ್ಬನೇ ಆಡಳಿತದಿಂದ ಬಂದಿರುವ ವ್ಯಕ್ತಿಯಲ್ಲ. ನಾನು ಯಾವುದೇ ಆಡಳಿತಾತ್ಮಕ ಅನುಭವವನ್ನು ಹೊತ್ತುಕೊಂಡು ಬಂದಿರಲಿಲ್ಲ. ನಾನು ನಿರ್ಣಾಯಕ ದೃಷ್ಟಿಕೋನದೊಂದಿಗೆ ಬಂದಿರಬಹುದು. ಅದೂ ಇರಲಿ......

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News