ಮಾತುಕತೆಗಾಗಿ ಸಚಿವರನ್ನು ಭೇಟಿಯಾಗಿ ವಾಗ್ವಾದಕ್ಕಿಳಿದ ಬಿಜೆಪಿ ಮುಖಂಡರು: 8 ಮಂದಿ ಪೊಲೀಸ್ ವಶಕ್ಕೆ

Update: 2018-11-20 11:02 GMT

ಕಾಸರಗೋಡು, ನ.20: ಮಾತುಕತೆ ನಡೆಸಲೆಂದು ಅನುಮತಿ ಕೋರಿ ಕೇರಳ ದೇವಸ್ವಂ ಸಚಿವರನ್ನು ಭೇಟಿಯಾದ ಬಿಜೆಪಿ ಮುಖಂಡರು ವಾಗ್ವಾದಕ್ಕಿಳಿದು ಪ್ರತಿಭಟನೆ ನಡೆಸಿದ ಘಟನೆ ಕಾಞಂಗಾಡ್‌ನಲ್ಲಿಂದು ಮಧ್ಯಾಹ್ನ ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಞಂಗಾಡ್‌ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸಹಕಾರಿ ಸಪ್ತಾಹದ ಸಮಾರೋಪ ಸಮಾರೋಪದ ಉದ್ಘಾಟನೆಗಾಗಿ ಆಗಮಿಸಿದ್ದ ದೇವಸ್ವಂ ಸಚಿವ ಕಡಂಗ ಪಳ್ಳಿ ಸುರೇಂದ್ರನ್ ಇಲ್ಲಿನ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಸಚಿವರ ಜೊತೆ ಮಾತುಕತೆ ನಡೆಸಲು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಅನುಮತಿ ಕೋರಿದ್ದರು. ಅದರಂತೆ ಅವರಿಗೆ ಅನುಮತಿ ನೀಡಲಾಗಿತ್ತು. ಶ್ರೀಕಾಂತ್ ಹಾಗೂ ಉಳಿದ ಏಳು ಮಂದಿ ಸಚಿವರನ್ನು ಭೇಟಿಯಾಗಿ ಮಾತುಕತೆಯ ಬದಲು ವಾಗ್ವಾದಕ್ಕಿಳಿದರು. ಅಲ್ಲದೇ ಅಲ್ಲೇ ಪ್ರತಿಭಟನೆ ನಡೆಸಲಾರಂಭಿಸಿದರು. ನಾಮಜಪ ಪಠಿಸಲಾರಂಭಿಸಿದರು. ಈ ವೇಳೆ ಅಲ್ಲಿದ್ದ ಪೊಲೀಸರು ಬಿಜೆಪಿ ಮುಖಂಡರನ್ನು ವಶಕ್ಕೆ ಪಡೆದುಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್, ಮುಖಂಡರಾದ ಎ.ವೇಲಾಯುಧನ್, ಸುಧಾಮ ಗೋಸಾಡ, ಎನ್.ಬಾಬುರಾಜ್, ರಾಜೇಶ್, ಪ್ರದೀಪ್ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಹೊಸದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News