ಪಿಂಚಣಿದಾರರು ಈಗ ಆನ್‌ಲೈನ್‌ನಲ್ಲಿಯೂ ಜೀವಿತ ಪ್ರಮಾಣಪತ್ರ ಪಡೆಯುವುದು ಹೇಗೆ?: ಇಲ್ಲಿದೆ ಮಾಹಿತಿ

Update: 2018-11-20 11:12 GMT

ಪಿಂಚಣಿದಾರರು ತಾವು ಇನ್ನೂ ಜೀವಂತವಿದ್ದೇವೆ ಎನ್ನುವುದಕ್ಕೆ ಪ್ರಮಾಣಪತ್ರವನ್ನು ಪ್ರತಿವರ್ಷ ನವಂಬರ್‌ನೊಳಗೆ ಸಲ್ಲಿಸಲೇಬೇಕು,ಇಲ್ಲದಿದ್ದರೆ ಅವರಿಗೆ ಪಿಂಚಣಿ ಸ್ಥಗಿತಗೊಳ್ಳುತ್ತದೆ. ಈ ಪ್ರಮಾಣಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಪ್ರತಿ ತಿಂಗಳು ತಮ್ಮ ಪಿಂಚಣಿ ಹಣ ಜಮೆಯಾಗುವ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಯಿಂದ ದೂರದಲ್ಲಿರುವ ಪಿಂಚಣಿದಾರರಿಗಂತೂ ನವಂಬರ್ ಅಂದರೆ ಆತಂಕದ ತಿಂಗಳಾಗಿರುತ್ತದೆ.

ಸೇವಾನಿವೃತ್ತಿಯ ಬಳಿಕ ಹೆಚ್ಚಿನ ಪಿಂಚಣಿದಾರು ತಮ್ಮ ಸ್ವಂತ ಊರುಗಳಲ್ಲಿ ಅಥವಾ ಇನ್ನಿತರ ಕಾರಣಗಳಿಂದ ದೂರದ ಊರುಗಳಲ್ಲಿ ನೆಲೆಸುತ್ತಾರೆ. ಇಂತಹವರು ತಮ್ಮ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಲೆಂದೇ ದೂರದ ಪ್ರಯಾಣವನ್ನು ಮಾಡಬೇಕಾಗುತ್ತದೆ ಮತ್ತು ಇದು ಕಿರಿಕಿರಿಯನ್ನುಂಟು ಮಾಡುತ್ತದೆ.

ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರವನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಹೀಗೆ ಎರಡೂ ವಿಧಗಳಲ್ಲಿ ಪಡೆಯಬಹುದಾಗಿದೆ.

► ಸಾಂಪ್ರದಾಯಿಕ ಜೀವಿತ ಪ್ರಮಾಣಪತ್ರ

ಇದಕ್ಕಾಗಿ ಪಿಂಚಣಿದಾರರು ಎಂದಿನಂತೆ ತಮ್ಮ ಪಿಂಚಣಿ ಜಮೆಯಾಗುವ ಬ್ಯಾಂಕ್ ಶಾಖೆ ಅಥವಾ ಅಂಚೆಕಚೇರಿಗೆ ಖುದ್ದಾಗಿ ತೆರಳಿ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸಿ ಯಾವುದೇ ತೊಂದರೆಯಿಲ್ಲದೆ ಜೀವಿತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು. ಆದರೆ ಬ್ಯಾಂಕ್ ಶಾಖೆ ಅಥವಾ ಅಂಚೆಕಚೇರಿಯ ಸಮೀಪವೇ ವಾಸವಾಗಿದ್ದರೆ ಮತ್ತು ಅನಾರೋಗ್ಯದಿಂದಾಗಿ ಅಲ್ಲಿಗೆ ಖುದ್ದಾಗಿ ತೆರಳಲು ಸಾಧ್ಯವಿಲ್ಲದಿದ್ದರೆ ಪಿಂಚಣಿಯನ್ನು ವಿತರಿಸುವ ಬ್ಯಾಂಕ್ ಅಥವಾ ಅಂಚೆಕಚೇರಿಯ ಅಧಿಕಾರಿಯೋರ್ವರು ಪಿಂಚಣಿದಾರರ ಮನೆಗೆ ಭೇಟಿ ನೀಡಿ ಜೀವಿತ ಪ್ರಮಾಣಪತ್ರವನ್ನು ನೀಡಲು ಅಗತ್ಯ ವಿಧಿವಿಧಾನಗಳನ್ನು ಪೂರೈಸಬಹುದು.

►ಡಿಜಿಟಲ್ ಜೀವಿತ ಪ್ರಮಾಣಪತ್ರ

ಪಿಂಚಣಿ ಪಡೆಯುವ ಊರಿನಿಂದ ದೂರದಲ್ಲಿ ಪಿಂಚಣಿದಾರನಿದ್ದಾಗ ಸಮಸ್ಯೆಗಳು ಉದ್ಭವವಾಗುತ್ತವೆ. ಪ್ರತಿವರ್ಷ ಜೀವಿತ ಪ್ರಮಾಣಪತ್ರವನ್ನು ಪಡೆಯಲು ಬ್ಯಾಂಕ್ ಶಾಖೆ ಅಥವಾ ಅಂಚೆಕಚೇರಿಯಿರುವ ಊರಿಗೆ ಪ್ರಯಾಣಿಸುವುದು ಬಹಳಷ್ಟು ತೊಂದರೆಗಳು ಮತ್ತು ಅನಗತ್ಯ ಅನಾನೂಕೂಲತೆಗಳನ್ನುಂಟು ಮಾಡುತ್ತದೆ. ವಿಶೇಷವಾಗಿ ವಯಸ್ಸಾದವರು ಮತ್ತು ಸದಾ ಖುದ್ದಾಗಿ ಹಾಜರಾಗುವ ಸ್ಥಿತಿಯಲ್ಲಿಲ್ಲದವರಿಗಂತೂ ಇದು ದೊಡ್ಡ ಸಮಸ್ಯೆಯಾಗುತ್ತದೆ.

ಈ ಸಮಸ್ಯೆಯನ್ನು ನಿವಾರಿಸಲು ಸರಕಾರವು ಪಿಂಚಣಿದಾರರಿಗೆ ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು ವಿತರಿಸಲು ‘ಜೀವನ್ ಪ್ರಮಾಣ್’ ಹೆಸರಿನ ವ್ಯವಸ್ಥೆಯೊಂದನ್ನು ಆರಂಭಿಸಿದೆ. ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಗೆ ಭೇಟಿ ನೀಡದೆ ಆಧಾರ್ ವೇದಿಕೆಯನ್ನು ಬಳಸಿಕೊಂಡು ಬಯೊಮೆಟ್ರಿಕ್ ದೃಢೀಕರಣದ ಮೂಲಕ ಆನ್ ಲೈನ್‌ನಲ್ಲಿ ಜೀವಿತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು. ಯಶಸ್ವಿ ದೃಢೀಕರಣದ ಬಳಿಕ ಡಿಜಿಟಲ್ ಜೀವಿತ ಪ್ರಮಾಣಪತ್ರವು ಸೃಷ್ಟಿಯಾಗುತ್ತದೆ ಮತ್ತು ‘ಲೈಫ್ ಸರ್ಟಿಫಿಕೇಟ್ ರಿಪೋಸಿಟರಿ’ಯಲ್ಲಿ ಸಂಗ್ರಹಿಸಲ್ಪಡುತ್ತದೆ. ಇದು ಪಿಂಚಣಿಯನ್ನು ವಿತರಿಸುವ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಗೆ ಆನ್‌ಲೈನ್ ಮೂಲಕ ಲಭ್ಯವಿರುತ್ತದೆ.

ಆನ್‌ಲೈನ್‌ನಲ್ಲಿ ಜೀವಿತ ಪ್ರಮಾಣಪತ್ರವನ್ನು ಜನರೇಟ್ ಮಾಡಲು ವಿಂಡೋಸ್ 7 (ಅಥವಾ ಹೆಚ್ಚಿನ) ಒಎಸ್ 32 ಮತ್ತು 64 ಬಿಟ್‌ನೊಂದಿಗೆ ಪರ್ಸನಲ್ ಕಂಪ್ಯೂಟರ್ ಅಥವಾ ಆ್ಯಂಡ್ರಾಯ್ಡಾ 4 ಮತ್ತು ಮೇಲಿನ ಮೊಬೈಲ್ ಅಥವಾ ಟ್ಯಾಬ್ಲೆಟ್ ಹಾಗೂ ಫಿಂಗರ್ ಪ್ರಿಂಟ್ ಸ್ಕಾನರ್ ಅಥವಾ ಐರಿಸ್ ಸ್ಕಾನರ್‌ನಂತಹ ಬಯೊಮೆಟ್ರಿಕ್ ಸಾಧನ ಅಗತ್ಯವಾಗುತ್ತದೆ. ಮೊದಲಿಗೆ(jeevanpramaan.gov.in/app/download)  ನಿಂದ ಪಿಸಿ/ಮೊಬೈಲ್/ಟ್ಯಾಬ್ಲೆಟ್ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಪಿಂಚಣಿದಾರರ ಆಧಾರ್,ಪೆನ್ಶನ್ ಪೇ ಆರ್ಡರ್,ಬ್ಯಾಂಕ್ ಖಾತೆ,ಬ್ಯಾಂಕಿನ ಹೆಸರು ಮತ್ತು ಮೊಬೈಲ್ ನಂಬರ್ ಮಾಹಿತಿಗಳನ್ನು ಒದಗಿಸುವ ಮೂಲಕ ನಿಮ್ಮನ್ನು ನೋಂದಾಯಿಸಿಕೊಳ್ಳಬೆಕಾಗುತ್ತದೆ. ನೋಂದಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸ್ಕಾನರ್‌ನ್ನು ಬಳಸಿ ಬೆರಳಚ್ಚು ಅಥವಾ ಐರಿಸ್(ಕಣ್ಪೊರೆ)ನ್ನು ಒದಗಿಸಬೇಕಾಗುತ್ತದೆ ಮತ್ತು ಸ್ವಯಂ ದೃಢೀಕರಿಸಬೇಕಾಗುತ್ತದೆ.

ಪಿಂಚಣಿದಾರರ ಬಳಿ ಸ್ಕಾನರ್ ಅಥವಾ ಇಂತಹ ಪಿಸಿ/ಮೊಬೈಲ್/ಟ್ಯಾಬ್ಲೆಟ್ ಇಲ್ಲದಿದ್ದರೆ ಹಿರಿಯ ನಾಗರಿಕರ ಸೇವಾ ಕೇಂದ್ರ(ಸಿಎಸ್‌ಸಿ)ಅಥವಾ ಅಂಚೆಕಚೇರಿ ಮತ್ತು ಬ್ಯಾಂಕ್ ಮತ್ತು ಟ್ರೆಝರಿಗಳಂತಹ ಪಿಂಚಣಿಗಳನ್ನು ವಿತರಿಸುವ ಜೀವನ್ ಪ್ರಮಾಣ್ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ. ಅಲ್ಲಿ ಅಗತ್ಯ ಮಾಹಿತಿಗಳನ್ನು ಒದಗಿಸಿ ಜೀವಿತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು. 7738299899 ಸಂಖ್ಯೆಗೆ ಜೆಪಿಎಲ್ ಎಂದು ಉಲ್ಲೇಖಿಸಿ ಜೊತೆಗೆ ಪಿನ್‌ಕೋಡ್ ನಮೂದಿಸಿ ಎಸ್‌ಎಂಎಸ್ ಕಳುಹಿಸುವ ಮೂಲಕ ಸಮೀಪದಲ್ಲಿರುವ ಸಿಎಸ್‌ಸಿಯ ವಿವರಗಳನ್ನು ಪಡೆದುಕೊಳ್ಳಬಹುದು.

ಯಶಸ್ವಿ ದೃಢೀಕರಣದ ಬಳಿಕ ಪಿಂಚಣಿದಾರರಿಗೆ ಜೀವಿತ ಪ್ರಮಾಣಪತ್ರ ಐಡಿ ಮತ್ತು ಇತರ ವಿವರಗಳನ್ನೊಳಗೊಂಡಿರುವ ಎಸ್‌ಎಂಎಸ್ ಬರುತ್ತದೆ. ಪ್ರಮಾಣಪತ್ರವು ಲೈಫ್ ಸರ್ಟಿಫೀಕೇಟ್ ರಿಪೋಸಿಟರಿಯಲ್ಲಿರುತ್ತದೆ ಮತ್ತು ಯಾವಾಗ ಬೇಕಾದರೂ ಎಲ್ಲಿಂದಾದರೂ ಅದು ಪಿಂಚಣಿದಾರರಿಗೆ ಮತ್ತು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಲಭ್ಯವಿರುತ್ತದೆ.

ಪಿಂಚಣಿದಾರರು ಜೀವನ್ ಪ್ರಮಾಣ್ ಐಡಿ ಅಥವಾ ಆಧಾರ್ ಸಂಖ್ಯೆಯನ್ನು ಒದಗಿಸಿ ಜೀವನ್ ಪ್ರಮಾಣ್ ವೆಬ್‌ಸೈಟ್‌ನಿಂದ ಪ್ರಮಾಣಪತ್ರದ ಪಿಡಿಎಫ್ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಅದರ ವಿವರಗಳನ್ನು ಪಿಂಚಣಿಯನ್ನು ವಿತರಿಸುವ ಬ್ಯಾಂಕ್ ಶಾಖೆ ಅಥವಾ ಅಂಚೆಕಚೇರಿಯೊಂದಿಗೆ ಹಂಚಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News