ದೇಶದಲ್ಲಿ ಪ್ರಥಮ ಬಾರಿಗೆ ಟೆಲಿಕಾಂ ಟವರ್ ಅಳವಡಿಕೆಗೆ ರಾಜ್ಯದಲ್ಲಿ ಹೊಸ ನೀತಿ: ಸಚಿವ ಖಾದರ್‌

Update: 2018-11-20 12:31 GMT

ಮಂಗಳೂರು, ನ. 20: ದೇಶದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಸರಕಾರ ದೂರ ಸಂಪರ್ಕ ಜಾಲದ ಗೋಪುರ (ಟೆಲಿಕಾಂ ಟವರ್) ನಿರ್ಮಿಸಲು ನೀತಿ ರೂಪಿಸಿ ಜಾರಿಗೆ ತರುತ್ತಿದೆ. ಟೆಲಿಕಾಂ ಟವರ್ ನಿರ್ಮಿಸಲು ಇನ್ನು ಮುಂದೆ ಕಡ್ಡಾಯವಾಗಿ ಸರಕಾರದ ಅನುಮತಿ ಪಡೆಯಬೇಕಾಗಿದೆ ಮತ್ತು ಸರಕಾರ ರೂಪಿಸಿದ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ ಎಂದು ವಸತಿ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ನೀತಿಯ ಪ್ರಕಾರ ಶಾಲೆ, ಕಾಲೇಜು, ಧಾರ್ಮಿಕ ಕೇಂದ್ರ, ಆಸ್ಪತ್ರೆ ಇರುವ ಕಡೆಗಳಲ್ಲಿ 50 ಮೀ. ವ್ಯಾಪ್ತಿಯ ಒಳಗೆ ಟವರ್ ನಿರ್ಮಿಸುವಂತಿಲ್ಲ. ಬಿಬಿಎಂಪಿ, ಮಹಾ ನಗರಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್‌ಗಳಿಗೆ ಸೇರಿದಂತೆ ಬೇರೆ ರೀತಿಯ ತೆರಿಗೆ ಪಾವತಿಸಿ ಪರವಾನಿಗೆ ಪಡೆಯಬೇಕಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಲಕ್ಷ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 30 ಸಾವಿರ, ನಗರ ಸಭೆ 25 ಸಾವಿರ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 15 ಸಾವಿರ ನಿಗದಿ ಪಡಿಸಲಾಗಿದೆ. ಸದ್ರಿ ಕಾರ್ಯನಿರ್ವಹಿಸುತ್ತಿರುವ ಟವರ್‌ಗಳ ಮಾಲಕರಿಗೆ ಪರವಾನಿಗೆ ಪಡೆಯಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರು ವಿಧಾನ ಸಭಾ ಕ್ಷೇತ್ರದ ಕುಡಿಯುವ ನೀರಿನ ಯೋಜನೆಗೆ 198 ಕೋಟಿ ರೂ. ಅನುದಾನ

ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ತುಂಬೆಯಿಂದ ಕುಡಿಯುವ ನೀರಿನ ಯೋಜನೆಗೆ 198 ಕೋಟಿ ರೂ. ಅನುದಾನ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಹರೇಕಳದಲ್ಲಿ ನೇತ್ರಾವತಿ ನದಿಗೆ ಬ್ಯಾರೇಜ್, ಸೇತುವೆ

ಅಡ್ಯಾರ್ ಹರೇಕಳದಲ್ಲಿ ನೇತ್ರಾವತಿ ನದಿಗೆ ಬ್ಯಾರೇಜ್, ಸೇತುವೆಯನ್ನು ನಿರ್ಮಿಸಲು 178 ಕೋಟಿ ರೂ. ಯೋಜನೆ ಜಾರಿಯಾಗಲಿದೆ. ಇದರಿಂದ ಸಮುದ್ರದ ನೀರು ಒಳನುಗ್ಗುವುದನ್ನು ತಡೆಯಲು ಮತ್ತು ಕುಡಿಯುವ ನೀರಿನ ಬಳಕೆಯ ದೃಷ್ಟಿಯಿಂದಲೂ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಗರದ ಕಂಕನಾಡಿಯಲ್ಲಿ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣವನ್ನು 41 ಕೋಟಿ ರೂ. ವೆಚ್ಚದಲ್ಲಿ ಕೆಯುಐಡಿಎಫ್‌ಸಿ ಮತ್ತು ಮನಪಾ ಜಂಟಿಯಾಗಿ ನಿರ್ಮಿಸಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಬೆಂಗಳೂರಿನ ಜಯ ದೇವ ಹೃದ್ರೋಗ ಆಸ್ಪತ್ರೆಯ ವಿಭಾಗವನ್ನು ಮಂಗಳೂರಿನಲ್ಲಿ ತೆರೆಯುವ ಯೋಜನೆ ಇದೆ ಎಂದು ಹೇಳಿದರು.

ಕಬ್ಬು ಬೆಲೆ ನಿಗದಿಪಡಿಸಿರುವುದು ಕೇಂದ್ರ ಸರಕಾರ, ಮುಖ್ಯಮಂತ್ರಿಯಲ್ಲ

ಕಬ್ಬು ಬೆಳೆಗಾರರ ಜೊತೆ ಸಮಾಲೋಚನೆ ನಡೆಸಿ ಕೇಂದ್ರ ಸರಕಾರ ಈ ಹಿಂದೆ ಬೆಲೆ ನಿಗದಿಪಡಿಸಿತ್ತು. ಆದರೆ ಈಗ ರಾಜ್ಯದ ಮುಖ್ಯ ಮಂತ್ರಿಯ ಮೇಲೆ ಆರೋಪ ಮಾಡಲಾಗುತ್ತಿದೆ. ಇದೀಗ ಮತ್ತೆ ಬೆಲೆ ನಿಗದಿ ಮಾಡಬೇಕಾಗಿರುವುದು ಕೇಂದ್ರ ಸರಕಾರ ಹೊರತು ರಾಜ್ಯ ಸರಕಾರವಲ್ಲ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮನಪಾ ಮೇಯರ್ ಭಾಸ್ಕರ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ, ಸದಾಶಿವ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News