ಮೀಲಾದುನ್ನಬಿ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯಿಂದ ಸಿಹಿ ವಿತರಣೆ

Update: 2018-11-20 14:08 GMT

ಭಟ್ಕಳ, ನ. 20: ಪ್ರವಾದಿ ಮುಹಮ್ಮದ್(ಸ) ರ ಜೀವನ ಮತ್ತು ಸಂದೇಶವನ್ನು ಅರಿಯಲು ಮತ್ತು ಸೌಹಾರ್ದತೆಯನ್ನುಂಟು ಮಾಡಲು ಆಯೋಜಿಸಿರುವ ರಾಜ್ಯವ್ಯಾಪಿ ಸೀರತ್ ಅಭಿಯಾನದ ಅಂಗವಾಗಿ ‘ಮೀಲಾದುನ್ನಬಿ’ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ವತಿಯಿಂದ ಪರಿಚಯ ಪುಸ್ತಿಕೆ ಮತ್ತು ಸಿಹಿಯನ್ನು ವಿತರಿಸಲಾಯಿತು.

ಇಲ್ಲಿನ ಶಮ್ಸುದ್ದೀನ್ ವೃತ್ತದಲ್ಲಿ ‘ಲೋಕನಾಯಕ ಪ್ರವಾದಿ ಮುಹಮ್ಮದ್(ಸ)  ’ಎಂಬ ಪುಸ್ತಿಕೆ ವಿತರಣಾ ಕಾರ್ಯಕ್ರಮವು ಗಿತ್ರಿಫ್ ರಿದಾ ಮಾನ್ವಿಯ ಕುರ್‍ಆನ್ ಪಠಣದೊಂದಿಗೆ  ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಸಂಚಾಲಕ ಮೌಲಾನ ಎಸ್.ಎಂ. ಸೈಯ್ಯದ್ ಝುಬೇರ್ ನಾವು ಪ್ರತಿಯೊಬ್ಬರು ಪ್ರೀತಿ ಪ್ರೇಮದಿಂದ ಬದುಕುವಂತಾಗಬೇಕು ಎಂಬ ಸಂದೇಶವನ್ನು ಪ್ರವಾದಿ ಮುಹಮ್ಮದ್(ಸ) ಸಾರಿದ್ದರು. ಅವರು ಮಾನವ ಕುಲಕ್ಕೆ ಕರುಣೆಯಾಗಿದ್ದರು. ಗಾಳಿ, ಬೆಳಕು ಹೇಗೆ ಎಲ್ಲರಿಗಾಗಿದೆಯೋ ಪ್ರವಾದಿ ಸಂದೇಶವು ಕೂಡು ಎಲ್ಲ ಸಮುದಾಯದವರಿಗಾಗಿದೆ ಎಂದ ಅವರು ಪ್ರೀತಿಯ, ಮಾನವೀಯ, ಸೌಹಾರ್ದದ ಸಂದೇಶಗಳನ್ನು ನಾವೆಲ್ಲರು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು. 

ಪತ್ರಕರ್ತ ಎಂ.ಆರ್.ಮಾನ್ವಿ  ಮಾತನಾಡಿ, ಒಬ್ಬರು ಇನ್ನೊಬ್ಬರನ್ನು ತಿಳಿಯುವ ಮತ್ತು ತಿಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆದಾಗ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆಯುಂಟಾಗುತ್ತದೆ. ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ಆಯೋಜಿಸಿರುವ ಈ ಅಭಿಯಾನದ ಮೂಲಕ ಜಗತ್ಪ್ರಸಿದ್ಧ ದಾರ್ಶನಿಕ ಪ್ರವಾದಿ ಮುಹಮ್ಮದ್ ರನ್ನು ಸುಲಭವಾಗಿ ಅರಿಯುವಂತಾಗುತ್ತದೆ. ನಾವು ಒಬ್ಬರು ಇನ್ನೊಬ್ಬರನ್ನು ಸಹಿಸಿಕೊಳ್ಳುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು, ಧರ್ಮ ನಮಗೆ ಇದನ್ನೆ ಕಲಿಸಿಕೊಡುತ್ತದೆ ಎಂದರು. 

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಉತ್ತರ ಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ಮೌಲಾನ ಯಾಸಿರ್ ನದ್ವಿ ಬರ್ಮಾವರ್, ಖಮರುದ್ದೀನ್ ಮಷಾಯಿಕ್, ಶೌಕತ್ ಖತೀಬ್, ಅಬ್ದುಲ್ ಜಬ್ಬಾರ್ ಅಸದಿ, ಸೈಫುಲ್ಲಾ ಅಕ್ರಮಿ, ಸನಾವುಲ್ಲಾ ಅಸದಿ, ಸಲಾಹುದ್ದೀನ್ ಎಸ್.ಕೆ. ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು. ಜಾಮಿಯಾ ಇಸ್ಲಾಮಿಯಾ ಪ್ರಾಧ್ಯಾಪಕ ಮೌಲಾನ ಇಕ್ಬಾಲ್ ನದ್ವಿ ನಾಯ್ತೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News