ನ.23: ತುಳು ಕೀ ಬೋರ್ಡ್ ಅನಾವರಣ

Update: 2018-11-20 14:19 GMT

ಮಂಗಳೂರು, ನ.20: ಭಾರತೀಯ ವಿವಿಧ ಭಾಷೆಗಳನ್ನು ಒಂದೇ ಕೀ-ಬೋರ್ಡ್ ಮೂಲಕ ಬಳಸಲು ಸಾಧ್ಯವಾಗುವಂತೆ ಫೋನೆಟಿಕ್ ಕೀ-ಬೋರ್ಡ್ ಸಿದ್ದಗೊಂಡಿದ್ದು, ಅದರ ತುಳು ಲಿಪಿಯ ಕೀ-ಬೋರ್ಡನ್ನು ನ.23ರಂದು ದುಬೈಯಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಉಡುಪಿ ಜಿಲ್ಲೆಯ ಕುತ್ಯಾರು ಮೂಲದ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಸಾಫ್ಟವೇರ್ ತಜ್ಞ ಗುರುಪ್ರಸಾದ್ ಈ ಕೀ ಬೋರ್ಡ್ ತಯಾರಿಸಿದ್ದು, ಇದರಲ್ಲಿ 12 ಭಾರತೀಯ ಭಾಷೆಗಳನ್ನು ಕೇವಲ ಸಂಕೇತಗಳನ್ನು ಬದಲಾಯಿಸುವ ಮೂಲಕ ಬಳಸಲು ಸಾದ್ಯವಾಗುವಂತೆ ತಯಾರು ಮಾಡಲಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು, ದೇವನಾಗರಿ, ಸಂಸ್ಕ್ರತ, ಬೆಂಗಾಳಿ, ಗುರುಮುಖಿ, ಒಡಿಯಾ, ಗುಜರಾತಿ ಅಲ್ಲದೆ ಕಾಶ್ಮೀರಿ ಲಿಪಿಯನ್ನು ಇದರಲ್ಲಿ ಅಳವಡಿಸಲಾಗಿದೆ.

ಯಾವುದೇ ಲಿಪಿಯ ಕೀ-ಬೋರ್ಡ್ ಬಳಸಿ ಯಾವುದೇ ಭಾರತೀಯ ಲಿಪಿಗಳನ್ನು ಮುದ್ರಿಸಬಹುದು. ಅಂದರೆ ಕನ್ನಡ ಲಿಪಿಯ ಕೀ-ಬೋರ್ಡ್ ಬಳಸಿ ಕಾಶ್ಮೀರಿ ಭಾಷೆಯ ಲೇಖನವನ್ನು ರಚಿಸಬಹುದು. ತುಳು ಲಿಪಿಗೆ ಯುನಿಕೋಡ್ ಸಿಗದೇ ಇದ್ದರೂ ಈಚೆಗೆ ಲಭ್ಯವಾದ ತುಳುಲಿಪಿಯನ್ನು ಬಳಸಲು ಸಾಧ್ಯವಾಗುವಂತೆ ಈ ಕೀ-ಬೋರ್ಡನ್ನು ತಯಾರಿಸಲಾಗಿದೆ.

ಈ ಕೀ-ಬೋರ್ಡ್ ಯುಎಸ್‌ಬಿ ಮೂಲಕ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ಗಳಿಗೆ ಸಂಪರ್ಕ ಕಲ್ಪಿಸುವಂತೆ ತಯಾರು ಮಾಡಲಾಗಿದೆ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್,  ಆಂಡ್ರಾಯ್ಡ್ ಗಳಲ್ಲೂ ಬಳಸಬಹುದಾಗಿದ್ದರಿಂದ ತುಳು ಲಿಪಿ ಕಲಿಯಲು ಸುಲಭ ಸಾಧ್ಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News