ನ. 26: ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಉಡುಪಿಗೆ

Update: 2018-11-20 15:01 GMT

ಉಡುಪಿ, ನ.20: ಬೆಂಗಳೂರಿನ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ಪ್ರತಿ ವರ್ಷ ನಡೆಸುವ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಈ ಬಾರಿ ನ. 24ರಂದು ಬೆಂಗಳೂರಿನಿಂದ ಹೊರಡು ನ. 26ರಂದು ಬೆಳಗ್ಗೆ ಉಡುಪಿಗೆ ಆಗಮಿಸಲಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಓಂ ಶ್ರೀಕೃಷ್ಣಮೂರ್ತಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕದಾಸರ 531ನೇ ಜಯಂತ್ಯುತ್ಸವದ ಅಂಗವಾಗಿ ಈ ಜ್ಯೋತಿ ರಥಯಾತ್ರೆ ನಡೆಯಲಿದೆ ಎಂದರು. ನ.24ರ ಶನಿವಾರ ಬೆಳಗ್ಗೆ 8:30ಕ್ಕೆ ಬೆಂಗಳೂರು ಸಂಪಿಗೆ ಹಳ್ಳಿ ಬೀರೇಶ್ವರ ದೇವಸ್ಥಾನದಲ್ಲಿ ಬೆಂಗಳೂರು ನಗರ ಮೇಯರ್ ಗಂಗಾಬಿಕೆ ಅವರು ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಲಿದ್ದು, ವಿಧಾನಪರಿಷತ ಸದಸ್ಯ ಎಚ್.ಎಂ.ರೇವಣ್ಣ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು.

ನ. 25ರಂದು ಮಂಗಳೂರು ತಲುಪುವ ರಥಯಾತ್ರೆ, ಮಂಗಳೂರು ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ನ.26ರ ಬೆಳಗ್ಗೆ 9:30ಕ್ಕೆ ಉಡುಪಿ ಜೋಡು ಕಟ್ಟೆಗೆ ಆಗಮಿಸುವ ಸದ್ಭಾವನಾ ಜ್ಯೋತಿ, ನಗರದ ಪ್ರಮುಖ ಬೀದಿಗಳಲ್ಲಿ 751 ಕುಂಭ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಕಲಾತಂಡಗಳು ಹಾಗೂ ಡೊಳ್ಳು ಕುಣಿತವೂ ಇರಲಿದೆ ಎಂದು ಓಂ ಕೃಷ್ಣಮೂರ್ತಿ ತಿಳಿಸಿದರು.

ರಥಯಾತ್ರೆ ರಥಬೀದಿಯ ಕೃಷ್ಣಮಠದ ಎದುರಿಗಿರುವ ಕನಕದಾಸರ ಮಂದಿರದ ಎದುರು ಮುಕ್ತಾಯಗೊಳ್ಳಲಿದೆ. ಅಲ್ಲಿ ಕನಕದಾಸರ ಮೂರ್ತಿಗೆ ವಿಶೇಷ ಪೂಜೆಯ ಬಳಿಕ ಅಪರಾಹ್ನ 1 ಗಂಟೆಗೆ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ನಗರಸಭಾ ಪೌರಾಯುಕ್ತ ಆನಂದ ಪಿ.ಕಲ್ಲೋಳ್ಕರ್ ಭಾಗವಹಿಸಲಿದ್ದಾರೆ. ಡಾ.ಎನ್.ಕೆ.ರಾಮಶೇಷನ್ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕನಕ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮೇಟಿ ಮುದಿಯಪ್ಪ, ಅಧ್ಯಕ್ಷ ಹನುಮಂತ ಎಸ್.ಡೊಳ್ಳಿನ, ಗ್ಯಾನಪ್ಪ ಎಚ್.ಕುರಿ, ಬಸವರಾಜ ವೈ.ಕುರುಬರ, ಮಂಜು ಎಸ್.ಮೇಟಿ, ಮುತ್ತಪ್ಪ ಎಸ್.ಕುರಿ ಹಾಗೂ ಬೈಲ್ಲಪ್ಪ ಬುದಿನಗಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News