ಸಿಬಿಐ ಡಿಐಜಿಯ ಹೇಳಿಕೆ ‘ಕ್ರೈಮ್ ಥ್ರಿಲ್ಲರ್’ನ ಹೊಸ ಸಂಚಿಕೆ ಎಂದ ರಾಹುಲ್ ಗಾಂಧಿ

Update: 2018-11-20 15:08 GMT

ಹೊಸದಿಲ್ಲಿ, ನ. 20: ಸಿಬಿಐ ಡಿಐಜಿ ಮನೋಜ್ ಸಿನ್ಹಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ಕೇಂದ್ರ ಸರಕಾರದ ಅಧಿಕಾರಿಗಳ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳು ಕ್ರೈಮ್ ಥ್ರಿಲ್ಲರ್‌ನ ಹೊಸ ಸಂಚಿಕೆಯಂತಿದೆ ಹಾಗೂ ಚೌಕಿದಾರನೇ ಕಳ್ಳ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಸರಕಾರಿ ಅಧಿಕಾರಿಗಳು ಸಿಬಿಐಯ ಮಧ್ಯಪ್ರವೇಶಿಸುತ್ತಿರು ವುದರಿಂದ ಭಾರತದ ಪ್ರಜಾಪ್ರಭುತ್ವ ಅಳುತ್ತಿದೆ ಎಂದು ಅವರು ಹೇಳಿದರು. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ ತನಿಖೆಯಲ್ಲಿ ರಾಷ್ಟ್ರೀಯ ಭಧ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಸಚಿವ ಹರಿಭಾ ಪರ್ಥಿಭಾ ಚೌಧರಿ ಹಾಗೂ ಸಿವಿಸಿ ಕೆ.ವಿ. ಚೌಧರಿ ಸೇರಿದಂತೆ ಹಲವು ಅಧಿಕಾರಿಗಳು ಮಧ್ಯಪ್ರವೇಶಿಸುತ್ತಿದ್ದಾರೆ ಎಂದು ಸಿನ್ಹಾ ಹೇಳಿದ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ಅಸ್ತಾನ ಅವರನ್ನು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರೊಂದಿಗೆ ರಜೆಯಲ್ಲಿ ಕಳುಹಿಸಲಾಗಿದೆ. ರಾಹುಲ್ ಗಾಂಧಿ ಅವರ ಹೇಳಿಕೆಗೆ ದೋವಲ್ ಹಾಗೂ ಚೌಧರಿ ತತ್‌ಕ್ಷಣ ಪ್ರತಿಕ್ರಿಯೆ ನೀಡಿಲ್ಲ. ಆದರೆ, ‘ಈ ಆರೋಪ ಸುಳ್ಳು ಹಾಗೂ ಆಧಾರರಹಿತ’ ಎಂದು ಕೇಂದ್ರ ಕಲ್ಲಿದ್ದಲು ಖಾತೆಯ ಸಹಾಯಕ ಸಚಿವರು ಹೇಳಿದ್ದಾರೆ. ‘ಚೌಕಿದಾರ್ ಕಳ್ಳ’ ಶೀರ್ಷಿಕೆಯ ಕ್ರೈಮ್ ಥ್ರಿಲ್ಲರ್ ದಿಲ್ಲಿಯ ಹೊರಗೆ ನಡೆಯುತ್ತಿದೆ. ಹೊಸ ಸಂಚಿಕೆಯಲ್ಲಿ ಸಿಬಿಐ ಡಿಐಜಿ ಸಚಿವರು, ಎನ್‌ಎಸ್‌ಎ, ಕಾನೂನು ಕಾರ್ಯದರ್ಶಿ ಹಾಗೂ ಸಂಪುಟ ಕಾರ್ಯದರ್ಶಿಯ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇನ್ನೊಂದೆಡೆ, ಗುಜರಾತ್‌ನ ಅವರ ಪಾಲುದಾರ ಕೋಟಿಗಟ್ಟಲೆ ಹಣ ಸಂಗ್ರಹಿಸುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News