ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಮೀಲಾದುನ್ನಬಿ ಆಚರಣೆ

Update: 2018-11-20 15:13 GMT

ಉಡುಪಿ, ನ.20: ಪ್ರವಾದಿ ಮುಹಮ್ಮದ್ ಮುಸ್ತಫ (ಸ) ಅವರ ಜನ್ಮದಿನದ ಪ್ರಯುಕ್ತ ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಸಂಭ್ರಮದ ಮೀಲಾದು ನ್ನಬಿಯನ್ನು ಆಚರಿಸಲಾಯಿತು.

ನಗರದ ದೊಡ್ಡಣಗುಡ್ಡೆ ಜುಮಾ ಮಸೀದಿಯಲ್ಲಿ ಮೀಲಾದುನ್ನಬಿ ದಿನವನ್ನು ಆಚರಿಸಲಾಯಿತು. ಈ ಪ್ರಯುಕ್ತ ಮಸೀದಿಯಿಂದ ಹೊರಟ ಮೆರವಣಿಗೆಯು ಪೊಲೀಸ್ ಕ್ವಾರ್ಟಸ್, ಮನೋಳಿಗುಜ್ಜಿ, ಬುದಗಿ ಬಸ್ ನಿಲ್ದಾಣ ದವರೆಗೆ ಸಾಗಿ ಮತ್ತೆ ಮರಳಿ ಮಸೀದಿಗೆ ಆಗಮಿಸಿತು.

ಕಾಪು ತಾಲೂಕಿನಾದ್ಯಂತ ಪ್ರವಾದಿ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಕಾಪು ಪೊಲಿಪು ಜುಮಾ ಮಸೀದಿಯಿಂದ ಆರಂಭಗೊಂಡ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೊಪ್ಪಲಂಗಡಿ ಮಸೀದಿವರೆಗೆ ಸಾಗಿ, ಬಳಿಕ ಅಲ್ಲಿಂದ ಮಜೂರು, ಪಕೀರ್ಣಕಟ್ಟೆ, ಮಲ್ಲಾರ್ ಮಸೀದಿ ಯವರೊಂದಿಗೆ ಸೇರಿ ಕಾಪು ಪೇಟೆ ಮೂಲಕ ಸಾಗಿ ಪೊಲಿಪು ಮಸೀದಿಯಲ್ಲಿ ಸಮಾಪನಗೊಂಡಿತು.

ಕುಂಜೂರು ಮತ್ತು ಪೊಲ್ಯ ಮದರಸದ ಮೆರವಣಿಗೆಯು ಪಣಿಯೂರು ಮಾರ್ಗವಾಗಿ ಸಾಗಿ ಬಂದು ಭಾಸ್ಕರ್ ನಗರ ಸಯ್ಯದ್ ಅರಬಿ ಮದರಸದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಮೂಳೂರಿಗೆ ತೆರಳಿ ಸಮಾಪನಗೊಂಡಿತು. ಮೂಳೂರು ಜಮಾಅತ್ ರಿಂದ ನಡೆದ ಮೀಲಾದ್ ರ್ಯಾಲಿಯು ಹೆದ್ದಾರಿ ಮೂಲಕ ಮೂಳೂರು ಮಸೀದಿಗೆ ತೆರಳಿತು.

ಬೈಂದೂರು ತಾಲೂಕಿನ ನಾವುಂದ ಜುಮಾ ಮಸೀದಿಯ ಮೀಲಾದುನ್ನಬಿ ಮೆರವಣಿಗೆಯು ಮರವಂತೆಯಿಂದ ಕಿರಿಮಂಜೇಶ್ವರದವರೆಗೆ ಹೊರಟು ಅಲ್ಲಿಂದ ವಾಪಾಸ್ಸು ಮರವಂತೆಗೆ ಆಗಮಿಸಿ ಸಮಾಪ್ತಿಗೊಂಡಿತು. ಇದರಲ್ಲಿ ನೂರಾರು ಸಂಖ್ಯೆಯ ಮದ್ರಸ ಮಕ್ಕಳು, ಯುವಕರು ಪಾಲ್ಗೊಂಡಿದ್ದರು.

ಶಿರೂರಿನಲ್ಲಿ ಮೀಲಾದುನ್ನಬಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಪ್ರಯುಕ್ತ ಹಮ್ಮಿಕೊಳ್ಳಲಾದ ಮೆರವಣಿಗೆಯು ಕೋಣಮಕ್ಕಿ, ಶಿರೂರು ಪೇಟೆ, ಮುಸ್ಲಿಂ ಕೇರಿ, ಮಾರ್ಕೆಟ್ ಪ್ರದೇಶದಲ್ಲಿ ಸಾಗಿ ಬಂತು. ಅದೇ ರೀತಿ ಪಡುಬಿದ್ರೆ, ಕಾರ್ಕಳ ಸೇರಿದಂತೆ ಹಲವು ಕಡೆಗಳಲ್ಲಿ ಮೀಲಾದುನ್ನಬಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

ವಿವಿಧೆಡೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಪ್ರವಾದಿಯವರ ಸಂದೇಶಗಳನ್ನು ಸಾರಲಾಯಿತು. ಮಕ್ಕಳ ಆಕರ್ಷಕ ದಫ್ ಗಮನ ಸೆಳೆಯಿತು. ಮೆರವಣಿಗೆ ಯಲ್ಲಿ ಮಸೀದಿಯ ಗುರುಗಳು, ಮದ್ರಸ ಮಕ್ಕಳು, ಗ್ರಾಮಸ್ಥರು, ಸ್ಥಳೀಯರು ಪಾಲ್ಗೊಂಡಿದ್ದರು. ಮೆರವಣಿಗೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಹಿಂದೂ ಯುವಕರಿಂದ ತಂಪು ಪಾನೀಯ

ಕಾಪುವಿನಲ್ಲಿ ನಡೆದ ಮೀಲಾದುನ್ನಬಿ ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಕಾಪು ಪೇಟೆಯಲ್ಲಿ ಹಿಂದೂ ಯುವಕರು ತಂಪು ಪಾನೀಯ, ಕುಡಿಯುವ ನೀರು ವಿತರಿಸುವ ಮೂಲಕ ಸೌಹಾರ್ದತೆಯನ್ನು ಮೆರೆದರು.

ಈ ಸಂದರ್ಭದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್ ಅವರಿಂದ ಲಡ್ಡು, ಹಾಗೂ ಜಮಾಅತ್  ನವರಿಂದ ಸಿಹಿ ತಿಂಡಿಗಳನ್ನು ವಿತರಿಸಲಾಯಿತು.  ಕಾಪು ಪುರಸಭೆ ಅಧ್ಯಕ್ಷೆ ಮಾಲಿನಿ ಸೌಮ್ಯ, ಉಪಾಧ್ಯಕ್ಷ ಉಸ್ಮಾನ್ ಕಾಪು, ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ, ಸದಸ್ಯರಾದ ಅನಿಲ್, ಹರೀಶ್ ನಾಯಕ್, ಇಮ್ರಾನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News