ಯಕ್ಷಗಾನ ಕಲಾರಂಗ ಪ್ರಶಸ್ತಿಗೆ 16 ಮಂದಿ ಕಲಾವಿದರು ಆಯ್ಕೆ

Update: 2018-11-20 15:15 GMT

ಉಡುಪಿ, ನ.20: ಉಡುಪಿ ಯಕ್ಷಗಾನ ಕಲಾರಂಗವು ಪ್ರತಿ ವರ್ಷ ನೀಡುವ ‘ಯಕ್ಷಗಾನ ಕಲಾರಂಗ’ ಪ್ರಶಸ್ತಿಗೆ ಪಟ್ಲಗುತ್ತು ಮಹಾಬಲ ಶೆಟ್ಟಿ, ಜಯಂತ ನಾಯ್ಕ ಸೇರಿದಂತೆ 16 ಮಂದಿ ಯಕ್ಷಗಾನ ಕಲಾವಿದರು ಹಾಗೂ ‘ಶ್ರೀವಿಶ್ವೇಶ ತೀರ್ಥ ಪ್ರಶಸ್ತಿ’ಗೆ ಕಟೀಲು ಶ್ರೀದುರ್ಗಾ ಮಕ್ಕಳ ಮೇಳವನ್ನು ಆಯ್ಕೆ ಮಾಡ ಲಾಗಿದೆ.

ಯಕ್ಷಗಾನ ಕಲಾರಂಗ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಈ ಬಗ್ಗೆ ವಿವರ ನೀಡಿದರು. ಕಟೀಲು ಶ್ರೀ ದುರ್ಗಾ ಮಕ್ಕಳಮೇಳಕ್ಕೆ ಪ್ರದಾನ ಮಾಡಲಾಗುವ ಶ್ರೀವಿಶ್ವೇಶತೀರ್ಥ ಪ್ರಶಸ್ತಿಯು 50,000ರೂ. ನಗದು ಪುರಸ್ಕಾರ ಒಳಗೊಂಡಿದೆ. ಸಂಸ್ಥೆಯ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಯನ್ನು ಪ್ರೊ.ನಾರಾಯಣ ಎಂ.ಹೆಗಡೆ ಅವರಿಗೆ ನೀಡಲಾಗುವುದು ಎಂದರು.

ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಡಾ.ಬಿ.ಬಿ.ಶೆಟ್ಟಿ ಸ್ಮರಣಾರ್ಥ ಪಟ್ಲಗುತ್ತು ಮಹಾಬಲ ಶೆಟ್ಟಿ, ಪ್ರೊ.ಬಿ.ವಿ.ಆಚಾರ್ಯ ಸ್ಮರಣಾರ್ಥ ಜಯಂತ ನಾಯ್ಕ, ನಿಟ್ಟೂರು ಸುಂದರ್ ಶೆಟ್ಟಿ- ಮಹೇಶ್ ಡಿ.ಶೆಟ್ಟಿ ಸ್ಮರಣಾರ್ಥ ಸುಬ್ರಾಯ ಪಾಟಾಳಿ, ಬಿ.ಜಗಜ್ಜೀವನ ಶೆಟ್ಟಿ ಸ್ಮರಣಾರ್ಥ ರಾಜರತ್ನಂ ದೇವಾಡಿಗ, ಕೆ.ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಸೀತಾರಾಮ ಹೆಗಡೆ ಉಳವಿ, ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಉಬರಡ್ಕ ಉಮೇಶ್ ಶೆಟ್ಟಿ, ಭಾಗವತ ನಾರ್ಣಪ್ಪಉಪ್ಪೂರ ಸ್ಮರಣಾರ್ಥ ಎಚ್.ಶ್ರೀಧರ ಹಂದೆ, ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ- ಭಾಗವತ ವಾದಿರಾಜ ಹೆಬ್ಬಾರ ಸ್ಮರಣಾರ್ಥ ನರಾಡಿ ಬೋಜರಾಜ ಶೆಟ್ಟಿ, ಮಲ್ಪೆನಾರಾಯಣ ಸಾಮಗ ಸ್ಮರಣಾರ್ಥ ಪುತ್ತಿಗೆ ರಘುರಾಮ ಹೊಳ್ಳ, ಶಿರಿ ಯಾರ ಮಂಜುನಾಥ ನಾಯ್ಕ ಸ್ಮರಣಾರ್ಥ ಕೊಕ್ಕುಡ್ತಿ ಕೃಷ್ಣಮೂರ್ತಿ, ಕೋಟ ವೈಕುಂಠ ಸ್ಮರಣಾರ್ಥ ಭಾಸ್ಕರ ಜೋಶಿ ಶಿರಳಗಿ, ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಬಾಳೆಹದ್ದ ಕೃಷ್ಣ ಭಾಗವತ, ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಬಂಟ್ವಾಳ ಜಯರಾಮ ಆಚಾರ್ಯ, ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಡಿ.ಸಂತೋಷ್ ಕುಮಾರ್ ಹಾಗೂ ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಹಳುವಳ್ಳಿ ಗಣೇಶ್ ಭಟ್, ಪ್ರಭಾವತಿ ವಿ.ಶೆಣೈ- ವಿ.ಯು. ವಿಶ್ವನಾಥ್ ಶೆಣೈ ಗೌರವಾರ್ಥ ರಾಮ ದೇವಾಡಿಗ ಕೊಚ್ಚಾಡಿ ಅವರಿಗೆ ಪ್ರದಾನ ಮಾಡಲಾಗುವುದು. ಪ್ರತಿ ಪ್ರಶಸ್ತಿಯು ತಲಾ 20,000ರೂ. ನಗದು ಪುರಸ್ಕಾರ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ನ.25ರಂದು ಸಂಜೆ 6:30ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿರುವರು. ಅಧ್ಯಕ್ಷತೆಯನ್ನು ಡಾ.ಜಿ.ಶಂಕರ್ ವಹಿಸಲಿರುವರು. ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಕಲಾಂತರಂಗ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿರುವರು.

ಸಮಾರಂಭಕ್ಕೆ ಮೊದಲು ಅಪರಾಹ್ನ 2 ಗಂಟೆಯಿಂದ 2:30ರವರೆಗೆ ಇಂದ್ರಾಳಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ‘ಪೂರ್ವರಂಗ’ ಹಾಗೂ 2:30ರಿಂದ 5ಗಂಟೆವರೆಗೆ ಬಡಗುತಿಟ್ಟಿನ ಯಕ್ಷಗಾನ ‘ಶಶಿಪ್ರಭಾ ಪರಿಣಯ’ ಹಾಗೂ ಸಮಾರಂಭದ ನಂತರ ಕಟೀಲು ಶ್ರೀದುರ್ಗಾ ಮಕ್ಕಳ ಮೇಳದಿಂದ ‘ಕುಶ-ಲವ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್, ಜೊತೆ ಕಾರ್ಯದರ್ಶಿ ನಾರಾಯಣ ಹೆಗಡೆ, ಉಪಾಧ್ಯಕ್ಷ ಎಸ್.ವಿ.ಭಟ್, ಎಚ್.ಎಂ. ಶೃಂಗೇಶ್ವರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News