ವರದಕ್ಷಣಿ ಕಿರುಕುಳ ಆರೋಪ: ಎರಡು ಪ್ರತ್ಯೇಕ ದೂರು

Update: 2018-11-20 17:04 GMT

ಕಾಪು, ನ. 20: ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿರುವ ಬಗ್ಗೆ ಕಾಪು ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ. 

ಮಂಗಳೂರಿನ ಕುಂಜತ್ತಬೈಲು ನಿವಾಸಿ ತರನಮ್ ಬಾನು ಎಂಬವರಿಗೆ ಉಚ್ಚಿಲದ ಸುಭಾಸ್ ನಗರ ನಿವಾಸಿ ಮುಹಮ್ಮದ್ ಆಲಮ್ ಉಸ್ಮಾನ್ ಎಂಬವರೊಂದಿಗೆ 2015ರ ಆಗಸ್ಟ್ 16ರಂದು ಮಂಗಳೂರಿನಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ವೇಳೆ 70 ಪವನ್ ಚಿನ್ನ ಮತ್ತು 2 ಲಕ್ಷ ರೂ. ವರದಕ್ಷಿಣೆ ಬೇಡಿಕೆ ಇಟ್ಟಿದ್ದರು. ಅದರಂತೆ 43 ಪವನ್ ಚಿನ್ನ ಮತ್ತು 1,20,000 ರೂ. ವರದಕ್ಷಿಣೆ ನೀಡಲಾಗಿತ್ತು.

ಮದುವೆಯಾದ ಸ್ವಲ್ಪ ಸಮಯದ ಬಳಿಕ ಆರೋಪಿಗಳಾದ ಮುಹಮ್ಮದ್ ಆಲಮ್ ಉಸ್ಮಾನ್, ಸಯ್ಯದ್ ಇಕ್ಬಾಲ್ ಮಝ್‍ಹರ್ ಪಾಶಾ, ಸಾಧಿಕಾ ಬಾನು, ಅಷ್ಪಿಯಾ ಫರ್ಝಾನಾ, ಹನೀಫ್ ಯಾನೆ ಅಜರ್ ಸೇರಿ ವರದಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿದ್ದರು. ಅಲ್ಲದೆ ಆರೋಪಿಗಳು ಮೋಸ ಮಾಡುವ ಉದ್ದೇಶದಿಂದ ತರನಮ್ ಬಾನುರವರಿಗೆ ಮಾಹಿತಿ ಇಲ್ಲದ ಕೆಲವೊಂದು ದಾಖಲಾತಿಗಳಿಗೆ ಸಹಿ ಪಡೆದುಕೊಂಡು ನಂಬಿಕೆ ದ್ರೋಹ ಮಾಡಿರುತ್ತಾರೆ ಎನ್ನಲಾಗಿದ್ದು, ಕೆಲ ಸಮಯದ ನಂತರ ಆರೋಪಿಗಳು ತರನಮ್ ಬಾನು ರವರಿಗೆ ಚಿನ್ನವನ್ನು ಮನೆಯಲ್ಲಿ ಇಟ್ಟು ತಂದೆ ಮನೆಗೆ ಹೋಗಿ ಬರುವಂತೆ ಹೇಳಿ ಕಳುಹಿಸಿದ್ದರು.  ಮನೆಗೆ ಬಂದು ವಾಪಾಸು ಗಂಡನ ಮನೆಗೆ ಹೋದಾಗ ಆರೋಪಿಗಳು ಮನೆ ಒಳಗೆ ಸೇರಿಸದೆ ಮನೆಯಿಂದ ಹೊರಗೆ ಹಾಕಿರುವುದಾಗಿ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದಾರೆ. ಅದರಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲ್ವೇ ಸೇತುವೆ ಬಳಿ ಮಜೂರು ನಿವಾಸಿ ದಿಲ್ಶಾದ್ ಬಾನು ಅವರಿಗೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಪರಪ್ಪನಹಳ್ಳಿ ನಿವಾಸಿ ಮುಹಮ್ಮದ್ ಜಫರ್ ಎಂಬವರೊಂದಿಗೆ  2010ರ ಮಾರ್ಚ್ 11ರಂದು ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ಮುಹಮ್ಮದ್ ಜಾಫರ್ ಮತ್ತು ಅವರ ಮನೆಯವರು ಬೇಡಿಕೆ ಇಟ್ಟಂತೆ 5 ಪವನ್ ಚಿನ್ನ ಹಾಗೂ 70 ಸಾವಿರ ರೂ. ಹಣವನ್ನು ನೀಡಿರುತ್ತಾರೆ. ಮದುವೆಯ ನಂತರ ಆರೋಪಿಗಳಾದ ಗಂಡ ಮುಹಮ್ಮದ್ ಜಫರ್, ಮುಹಮ್ಮದ್ ಸಾಧಿಕ್, ಹಯಾತ್ ಪಾಷಾ, ಹಾಜಿರಾಬಿ, ರೆಹಮತುಲ್ಲಾ, ಶಂಶಾದ್, ಶಮೀಮ್ ಇವರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿದ್ದರು ಎಂದು ದೂರಲಾಗಿದೆ.

ಕೆಲವು ಸಮಯದ ಬಳಿಕ ಗಂಡ ಮುಹಮ್ಮದ್ ಜಫರ್ ಅವರಿಗೆ ದಿಲ್ಶಾದ್ ತಂದೆ ಗ್ಯಾರೇಜ್ ಅಂಗಡಿ ಮಾಡಿಕೊಟ್ಟಿದ್ದರು. ಬಳಿಕ ಮತ್ತೆ ಪದೇ ಪದೇ ಹಣಕ್ಕೆ ಬೇಡಿಕೆ ಇಡುತಿದ್ದರು. ಅದರಂತೆ 75ಸಾವಿರ ರೂ. ಹಣವನ್ನು ಗಂಡನಿಗೆ ನೀಡಿದ್ದಾರೆ. ನಂತರ ಆರೋಪಿ ವರದಕ್ಷಿಣೆ ತರುವಂತೆ ಪೀಡಿಸುತಿದ್ದರು. ಅಲ್ಲದೆ ಎರಡನೇ ಮದುವೆಯಾಗಲು ತಲಾಕ್ ನೀಡಲು ಒಪ್ಪಿಗೆ ನೀಡುವಂತೆ ಎಲ್ಲಾ ಆರೋಪಿಗಳು ಸೇರಿ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಬಲವಂತವಾಗಿ ಗರ್ಭಪಾತವನ್ನು ಮಾಡಿ ಹೆಚ್ಚಿನ ವರದಕ್ಷಣೆ ಹಣವನ್ನು ತರದಿದ್ದರೆ ಕೊಲ್ಲುವುದಾಗಿ ಜೀವ ಬೆದರಿಕೆ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದು, ಅದರಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News