ಶಬರಿಮಲೆ ಯಾತ್ರಾರ್ಥಿಗಳನ್ನು ಹರಕೆಯ ಕುರಿ ಮಾಡುತ್ತಿರುವ ಸಂಘ ಪರಿವಾರ: ಪಿಣರಾಯಿ ವಿಜಯನ್

Update: 2018-11-20 17:31 GMT

ತಿರುವನಂತಪುರ, ನ. 20: ಬಿಜೆಪಿ ಹಾಗೂ ಸಂಘ ಪರಿವಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ಸಂಘಟನೆಗಳು ಶಬರಿಮಲೆ ದೇವಾಲಯ ವಿವಾದವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಹಾಗೂ ದೇವಾಲಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

 ಋತುಚಕ್ರ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶ ಅವಕಾಶ ನೀಡಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ವಿರೋಧಿಸಿ ನಿರಂತರ ಪ್ರತಿಭಟನೆ ನಡೆಯುತ್ತಿರುವ ನಡುವೆ ಅವರು, ಶಬರಿಮಲೆ ದೇವಾಲಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕರ ಸೇವಕರನ್ನು ಕಳುಹಿಸಿ ಸಮಸ್ಯೆ ಹುಟ್ಟು ಹಾಕುವುದು ಸಂಘ ಪರಿವಾರದ ಉದ್ದೇಶ. ಅದು ಯಾತ್ರಾರ್ಥಿಗಳನ್ನು ಹರಕೆಯ ಕುರಿ ಮಾಡುತ್ತಿದೆ ಎಂದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರವಿವಾರ ರಾತ್ರಿ ದೇವಾಲಯದ ಸಂಕೀರ್ಣದಲ್ಲಿ 69 ಮಂದಿಯನ್ನು ಬಂಧಿಸಿರುವುದನ್ನು ಸಮರ್ಥಿಸಿಕೊಂಡರು ಹಾಗೂ ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು. ಶಬರಿಮಲೆ ವಿವಾದದಲ್ಲಿ ಕಾಂಗ್ರೆಸ್ ಹಾಗೂ ಆರ್‌ಎಸ್‌ಎಸ್ ಒಂದಾಗಿದೆ ಎಂದು ಅವರು ಹೇಳಿದರು. ಶಬರಿಮಲೆಯಲ್ಲಿ ಪರಿಸ್ಥಿತಿ ನಿಭಾಯಿಸುವುದು ಸಮಾಧಾನ ತಂದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎಲ್‌ಡಿಎಫ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ದಿನದ ಬಳಿಕ ಪಿಣರಾಯಿ ವಿಜಯನ್ ಈ ಹೇಳಿಕೆ ನೀಡಿದ್ದಾರೆ. ಶಬರಿಮಲೆ ಹಿಂಸಾಚಾರಾದ ಕೇಂದ್ರವಾಗಲು ಅವಕಾಶ ನೀಡಲಾರೆವು. ದೇವಾಲಯ ಸಂಕೀರ್ಣದಲ್ಲಿ ಹಿಂಸಾಚಾರ ನಡೆಸುವವರೊಂದಿಗೆ ಸರಕಾರ ರಾಜಿ ಮಾಡಿಕೊಳ್ಳಲಾರದು ಎಂದು ಅವರು ಪ್ರತಿಪಾದಿಸಿದ್ದಾರೆ. ಶಬರಿಮಲೆ ದೇವಾಲಯಕ್ಕೆ ದರ್ಶನಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ಭದ್ರತೆ ನೀಡಲಾಗುವುದು ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News