×
Ad

ವೆನ್ಲಾಕ್ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಧರಣಿ

Update: 2018-11-21 13:37 IST

ಮಂಗಳೂರು, ನ.21: ವೆನ್ಲಾಕ್ ಆಸ್ಪತ್ರೆಯ ಪ್ಯಾರಾ ಮೆಡಿಕಲ್ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ತಕ್ಷಣ ಉಪನ್ಯಾಸಕರ ನೇಮಕಾತಿಯೊಂದಿಗೆ ಪಠ್ಯ ಚಟುವಟಿಕೆಗಳನ್ನು ಆರಂಭಿಸುವಂತೆ ಒತ್ತಾಯಿಸಿ ಇಂದು ಎಸ್‌ಎಫ್‌ಐ (ಭಾರತ ವಿದ್ಯಾರ್ಥಿ ಫೆಡರೇಶನ್) ನೇತೃತ್ವದಲ್ಲಿ ಧರಣಿ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಭಾಗವಹಿಸಿದ್ದ ಧರಣಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಚರಣ್ ಶೆಟ್ಟಿ, ವಿದ್ಯಾರ್ಥಿಗಳಿಗೆ ತಕ್ಷಣ ಪಠ್ಯ ಚಟುವಟಿಕೆಗಳನ್ನು ಆರಂಭಿಸಬೇಕು, ಉಪನ್ಯಾಸಕರನ್ನು ನೇಮಕ ಮಾಡಲು ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲಿ ಕೂಲಿಯಾಳುಗಳಂತೆ ದುಡಿಸುವುದನ್ನು ನಿಲ್ಲಿಸಿ, ಅವರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಚಿಕಿತ್ಸೆ ನೀಡುವ ವೈದ್ಯರಿಂದ ಪಾಠ ಮಾಡಿಸುವ ಕ್ರಮವನ್ನು ಬಿಟ್ಟು ಖಾಯಂ ಉಪನ್ಯಾಸಕರನ್ನು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಮಾಧುರಿ ಬೋಳಾರ ಮಾತನಾಡಿ, ಕೋಚಿಂಗ್, ಪ್ರಾಕ್ಟಿಕಲ್ ಹೆಸರಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡಿಸಲಾಗುತ್ತಿದೆ. ಪ್ರತಿಭಟನೆ ಮಾಡಿದರೆ ಟಿಸಿ ನೀಡುವ ಬೆದರಿಯನ್ನೂ ವಿದ್ಯಾರ್ಥಿಗಳಿಗೆ ಒಡ್ಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದರು.

ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಶೈಕ್ಷಣಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಆಸ್ಪತ್ರೆಯಲ್ಲಿ ಶಿಕ್ಷಣ ಪಡೆಯುವ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಈ ಪರಿಸ್ಥಿತಿ ನಾಚಿಕೆಯ ಸಂಗತಿ ಎಂದರು.

ಗುತ್ತಿಗೆ ಆಧಾರಿತ ಕಾರ್ಮಿಕರ ರೀತಿಯಲ್ಲಿ ಶಿಕ್ಷಣ ಪಡೆಯಲು ಬಂದ ವಿದ್ಯಾರ್ಥಿಗಳನ್ನು ದುಡಿಸಲಾಗುತ್ತಿದೆ. ತರಗತಿ ನಡೆಸಲಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಕೊಠಡಿ ವ್ಯವಸ್ಥೆಯೇ ಇಲ್ಲದೆ, ಭವಿಷ್ಯದ ಕನಸು ಹೊತ್ತು ಬಂದ ವಿದ್ಯಾರ್ಥಿಗಳನ್ನು ಸತಾಯಿಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಧರಣಿಯಲ್ಲಿ ಎಸ್‌ಎಫ್‌ಐ ಮುಖಂಡರಾದ ಮಯೂರಿ, ವಿಕಾಸ್ ಕುತ್ತಾರ್, ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News