''ದ.ಕ. ಜಿಲ್ಲೆಯಲ್ಲೂ ಶೀಘ್ರದಲ್ಲೇ ಪೈಪ್‌ಲೈನ್ ಮೂಲಕ ಅಡುಗೆ ಅನಿಲ''

Update: 2018-11-21 12:31 GMT

ಮಂಗಳೂರು, ನ. 21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳ ಆಯ್ದ ಭಾಗಗಳಲ್ಲಿ ಶೀಘ್ರದಲ್ಲಿಯೇ ಪ್ರಥಮ ಹಂತದಲ್ಲಿ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಕೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲಿ ಗೇಲ್ ಗ್ಯಾಸ್ ಲಿಮಿಟೆಡ್ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಈ ನಗರ ಅನಿಲ ಪೂರೈಕೆ ಯೋಜನೆ (ಸಿಜಿಡಿ)ಯ ಶಿಲಾನ್ಯಾಸ ಡಿ. 22ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕದಲ್ಲಿ ಸಿಜಿಡಿ ಯೋಜನೆಯಡಿ ಅಡುಗೆ ಅನಿಲ ಪೂರೈಕೆಯ 10ನೆ ಸುತ್ತಿನ ಕಾರ್ಯಕ್ರಮಕ್ಕೆ ನಗರದ ಪುರಭವನದಲ್ಲಿ ಶಿಲಾನ್ಯಾಸ ನೆರವೇರಲಿದೆ. ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, 3 ಗಂಟೆಯ ಸುಮಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮೇಯರ್ ಭಾಸ್ಕರ ಕೆ. ಭಾಗವಹಿಸಲಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆ, ಉದ್ದಿಮೆ ಹಾಗೂ ವಾಣಿಜ್ಯ ಘಟಕಗಳಿಗೆ ಈ ಅನಿಲ ಪೂರೈಕೆಯಾಗಲಿದೆ. ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಮತ್ತು ಸುಳ್ಯ ತಾಲೂಕುಗಳ ಆಯ್ದ ಪ್ರದೇಶಗಳಲ್ಲಿ ಪ್ರಾಥಮಿಕ ಹಂತದಲ್ಲಿ ಅನಿಲ ಪೂರೈಕೆಗೆ ಪೈಪ್‌ಲೈನ್ ಅಳವಡಿಕೆಯಾಗಲಿದೆ. ಪ್ರಾಥಮಿಕ 25 ವರ್ಷಗಳ ಈ ಯೋಜನೆಗೆ 1972 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ 100 ಸಿಎನ್‌ಜಿ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದ್ದು, 3.50 ಲಕ್ಷ ಮನೆಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಗುರಿಯನ್ನು ಹೊಂದಲಾಗಿದೆ. 1250 ಕಿಮೀ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಕೆಯಾಗಲಿದ್ದು, ಇದರಿಂದ 20 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಇದು ಪರಿಸರ ಸ್ನೇಹಿಯಾಗಿದ್ದು, ದಿನದ 24 ಗಂಟೆಯೂ ನಿರಂತರ ಅಡುಗೆ ಅನಿಲ ಲಭ್ಯವಾಗಲಿದೆ. ಗ್ರಾಹಕರು ಅಡುಗೆ ಅನಿಲ ಸಿಲಿಂಡರ್‌ಗಾಗಿ ಬುಕ್ಕಿಂಗ್ ಮಾಡಿ ಕಾಯಬೇಕಾದ ಪ್ರಮೇಯ ತಪ್ಪಲಿದೆ. ಇದು ಸುರಕ್ಷಿತ, ಸೋರಿಕೆ ರಹಿತ ಹಾಗೂ ಸಿಲಿಂಡರ್ ಕಳ್ಳತನದಿಂದ ಮುಕ್ತವಾಗಿರುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ದ.ಕ. ಜಿಲ್ಲೆಯಲ್ಲಿ ಪೈಪ್‌ಲೈನ್ ಅಳವಡಿಕೆಯ ಸಾಧ್ಯತೆಗಳ ಕುರಿತಂತೆ ಅಧ್ಯಯನ ನಡೆಯಲಿದೆ. 2019ರ ಮಾರ್ಚ್‌ನೊಳಗೆ ಐದು ಸಿಎನ್‌ಜಿ ಸ್ಟೇಷನ್‌ಗಳನ್ನು ತೆರೆಯುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಗೇಲ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ವಿವೇಕ್ ವಾತೋಡ್ಕರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News